ಬಂಟ್ವಾಳ: ಬಂಟ್ವಾಳ ತಾಲೂಕು ಸಿಪಿಐ ಸಮಿತಿ ವತಿಯಿಂದ ಬಿ.ಸಿ.ರೋಡಿನಲ್ಲಿ ಶುಕ್ರವಾರ ಬೆಲೆ ಏರಿಕೆ ನಿಯಂತ್ರಣಕ್ಕೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಸಂದರ್ಭ ಮಾತನಾಡಿದ ಭಾರತ ಕಮ್ಯೂನಿಸ್ಟ್ ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬಂದು ಏಳು ವರ್ಷದ ಅವಧಿಯಲ್ಲಿ ಈ ದೇಶದ ಜನಸಾಮಾನ್ಯರ ಬದುಕು ಹಸನಾಗುವ ಬದಲು ತೀರಾ ದುಸ್ತರವಾಗಿದೆ. ಚುನಾವಣಾ ಪೂರ್ವ ಭರವಸೆಗಳು ಬಂಡವಾಳಗಾರರ ಪರವಾಗಿ ರೂಪಿತಗೊಳ್ಳುತ್ತಿದೆ. ಒಟ್ಟಾರೆಯಾಗಿ ಸರಕಾgದ ಸರ್ವಾಧಿಕಾರ ಧೋರಣೆ ಈ ದೇಶದ ಬಡವರ ಮತ್ತು ಮಧ್ಯಮವರ್ಗವನ್ನು ತೀವ್ರ ಸಂಕಷ್ಟದಲ್ಲಿ ಸಿಲುಕಿಸಿದೆ ಎಂದರು. ೨೦೧೪ ರ ಮೊದಲು ಯುಪಿಎ ಸರಕಾರ ಬೆಲೆಏರಿಕೆ ಮಾಡುವಾಗ ಇದೇ ಬಿಜೆಪಿಯವರು ವಿರೋಧಪಕ್ಷದಲ್ಲಿದ್ದುಕೊಂಡು ಮೋದಿ ನೇತೃತ್ವದಲ್ಲಿ ಭಾರಿ ಪ್ರತಿಭಟಿಸುತ್ತಿದ್ದರು. ಇದೀಗ ಕಳೆದ ೬ ವರ್ಷಗಳಲ್ಲಿ ಹಿಂದೆಂದೂ ಕಂಡರಿಯದಂತಹ ಬೆಲೆ ಏರಿಕೆಯಾಗುತ್ತಿದ್ದು, ಯಾವ ಬಿಜೆಪಿಯವರೂ ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಅಡುಗೆ ಅನಿಲ ಬೆಲೆಗಳು ಅನಿಯಮಿತಮಿತವಾಗಿ ಏರುತ್ತಿದ್ದು ಜನ ಪಡಬಾರದ ಕಷ್ಟ ಅನುಭವಿಸುತ್ತಿದ್ದರೂ ಮೋದಿಯವರು ಮಾತ್ರ ಏನೂ ಆಗದಂತೆ ನಟಿಸುತ್ತಿದ್ದಾರೆ. ಈ ಸರಕಾರ ಬರೇ ಸುಳ್ಳಿನಿಂದಲೇ ನಡೆಯುತ್ತಿದೆ ಎಂದು ಆರೋಪಿಸಿದರು.
ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿ, ರೈತರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಒಂದೆಡೆ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಮಿಕರನ್ನು ಬೀದಿ ಪಾಲು ಮಾಡಲಾಗುತ್ತಿದೆ ಎಂದರು. ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಮುಖಂಡರಾ ಭಾರತಿ ಪ್ರಶಾಂತ್ ಮಾತನಾಡಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಎಐವೈಎಫ್ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ್ ಕೆ ಮಾತನಾಡಿದರು. ನೇತೃತ್ವವನ್ನು ಸಿಪಿಐ ಹಿರಿಯ ಮುಂದಾಳು ಪಿ.ವಿಥಲ ಬಂಗೇರ, ಬಾಬು ಭಂಡಾರಿ, ಜಿಲ್ಲಾ ನಾಯಕರಾದ ಕರುಣಾಕರ ಮಾರಿಪಳ್ಳ, ಸುಧಾಕರ ಕಲ್ಲೂರು, ದಿನೇಶ್, ರಫು, ಹರ್ಷಿತ್, ಸರಸ್ವತಿ ಕೆ, ಕೇಶವತಿ, ಎಐವೈಎಫ್ ಕಾರ್‍ಯದರ್ಶಿ ಶ್ರೀನಿವಾಸ ಭಂಡಾರಿ, ಚಂದಪ್ಪ ನಾವೂರು, ಉಷಾ ವಿಟ್ಲ, ರಾಮ ವಿಟ್ಲ, ಸಾಮಾಜಿಕ ಹೋರಾಟಗಾರರಾದ ಬಿ ಎಂ ಪ್ರಭಾಕರ ದೈವಗುಡ್ಡೆ, ರಾಜಾ ಚಂಡ್ತಿಮಾರ್, ಶರೀಫ್ ಮಧ್ವ, ಎಂ.ಬಿ.ಭಾಸ್ಕರ, ಕಮಲಾಕ್ಷ, ದೇರಣ್ಣ ಪೂಜಾರಿ ವಹಿಸಿದ್ದರು. ಸಿಪಿಐ ಮುಂದಾಳು ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.