ಬಂಟ್ವಾಳ: ಜನಸೇವೆಯೇ ಜನಾರ್ದನಸೇವೆ ಎಂಬ ತತ್ವದಡಿ 84ರ ಹರೆಯದ ನಾಟಿವೈದ್ಯೆ ಮೀನಾಕ್ಷಿ ಆಚಾರ್ಯ ಅವರು ಬಂಟ್ವಾಳದಲ್ಲಿ ಸೇವಾಕಾರ್ಯವನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬಂಟ್ವಾಳದ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿತು. ರೋಟರಿ ಟೌನ್ ಅಧ್ಯಕ್ಷ ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನ್ಸ್ ಕ್ಲಬ್ ಅಧ್ಯಕ್ಷೆ ಸವಿತಾ ಚಿತ್ತರಂಜನ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಜತೆಕಾರ್ಯದರ್ಶಿ ಜಶ್ಮಿ ಕಿಶೋರ್, ಖಜಾಂಚಿ ವಿದ್ಯಾ ಉಮೇಶ್ ಉಪಸ್ಥಿತರಿದ್ದರು.
ಬಂಟ್ವಾಳ ಅಗ್ರಬೈಲು ನಾರಾಯಣ ಆಚಾರ್ಯ ರವರ ಪತ್ನಿ ಮೀನಾಕ್ಷಿ ಆಚಾರ್ಯ ಸುಮಾರು 5,000 ಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿದವರು. ಸರ್ಪಸುತ್ತು, ಕೆಂಪು, ಧೃಷ್ಟಿ ಬೊಕ್ಕೆ ಮುಂತಾದ ಅನೇಕ ರೋಗಗಳಿಗೆ ಗಿಡಮೂಲಿಕೆ ಔಷಧಿ ನೀಡುವುದರ ಮೂಲಕ ಚಿಕಿತ್ಸೆ ಮಾಡುತ್ತಿದ್ದಾರೆ.