ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ಬಜೆಟ್ ಜನಪರ ಕಾಳಜಿಯದ್ದಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸ್ವಾಗತಿಸಿದ್ದಾರೆ.
ಅನೇಕ ಸ್ವಾವಲಂಬನೆ ಸಾಧಿಸಲು ಸ್ವಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದ್ದು,ಕೃಷಿ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ. ಗೋಸಂವರ್ಧನೆ ಹಾಗೂ ದೇಶೀಯ ಗೋ ಸಂತತಿಯನ್ನು ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೊಂದರಂತೆ ಗೋ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಅಡಿಕೆ ಕೃಷಿಯನ್ನು ಕಾಡುತ್ತಿರುವ ಹಳದಿ ಎಲೆ ರೋಗದ ನಿರ್ಮೂಲನೆಗಾಗಿ ಬಜೆಟ್ ನಲ್ಲಿ ಕೃಷಿ ತಜ್ಞರ ವಿಶೇಷ ಸಂಶೋಧನಾ ಸಮಿತಿ ರಚಿಸಿ 25 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆಗೆ ಆದೇಶಿಸಿದ್ದು, ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಆಶಾದಾಯಕವಾಗಿದೆ ಎಂದವರು ವಿಶ್ಲೇಷಿಸಿದ್ದಾರೆ. ಕೌಶಲ್ಯಭಿವೃದ್ಧಿಗೆ ಯೋಜನೆಗಳು, ವಿಶೇಷ ಚೇತನರಿಗಾಗಿ ಹಲವಾರು ಯೋಜನೆಗಳು,ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪ್ರತಿಭಾ ಯೋಜನೆ, ಸಣ್ಣ ಕೈಗಾರಿಕಾ ಅಭಿವೃದ್ಧಿಗೆ ಯೋಜನೆಗಳು ಹೀಗೆ ರಾಜ್ಯದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಹೊತ್ತು ಬಂದ ಈ ಅಭಿವೃದ್ಧಿಶೀಲ ಹಾಗೂ ಭವಿಷ್ಯದ ಕರ್ನಾಟಕ ನಿರ್ಮಾಣದ ಕಡೆಗೆ ಹೆಜ್ಜೆಹಾಕುವ ಸ್ವಾಗತಾರ್ಹ ಬಜೆಟ್ ಇದಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.