ಪುರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನ
ಆಸ್ತಿ ತೆರಿಗೆ ಪರಿಷ್ಕರಣೆಗೆ ಬಂಟ್ವಾಳ ಪುರಸಭೆ ಒಪ್ಪಿಗೆ ಸೂಚಿಸಿದೆ. ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ವಿಶೇಷ ಸಭೆಯಲ್ಲಿ ೨೦೨೧- ೨೨ನೇ ಸಾಲಿನಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಾಡಳಿತ ನಿರ್ದೇಶಕರ ಸುತ್ತೋಲೆಯಂತೆ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದೆ. ಆಸ್ತಿ ತೆರಿಗೆ ವಿಚಾರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾರಿಗೂ ಹೊರೆಯಾಗದ ರೀತಿಯಲ್ಲಿ ಕಡಿಮೆ ಶೇಕಡಾ ದರವನ್ನು ನಿಗದಿಪಡಿಸಲಾಗಿದೆ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಈ ಸಂದರ್ಭ ಹೇಳಿದರು.
ಕರ್ನಾಟಕ ಸರಕಾರವು ಆಸ್ತಿತೆರಿಗೆ ಮತ್ತು ಖಾಲಿ ನಿವೇಶನ ತೆರಿಗೆಯನ್ನು ತಿದ್ದುಪಡಿ ಮಾಡಲು ಈಗಾಗಲೇ ಸರಕಾರದ ಮಟ್ಟದಲ್ಲಿ ಪುರಸಭಾ ಕಾಯ್ದೆ ತಿದ್ದುಪಡಿ ಮಾಡಿ ಗಜೆಟ್ ನೋಟಿಫಿಕೇಶನ್ ಪ್ರಚಾರ ಪಡಿಸಿ ಈ ಹಿಂದಿನ ತೆರಿಗೆ ಪದ್ದತಿಯನ್ನು ರದ್ದುಪಡಿಸಿರುವುದರಿಂದ ಆಯಾ ಪ್ರದೇಶದ ಆಸ್ತಿತೆರಿಗೆಯ ಶೇಕಡಾವಾರು ನಿಗದಿಪಡಿಸಲು ಆಯಾಸ್ಥಳೀಯ ಸಂಸ್ಥೆಗಳು ಕ್ರಮಕೈಗೊಳ್ಳಬೇಕಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ ಅದರಂತೆ ಈ ಬಗ್ಗೆ ಬಂಟ್ವಾಳ ಪುರಸಭೆಯ ವಿಶೇಷ ಸಭೆಯನ್ನು ಕರೆದನ್ವಯ ವಾಸ್ತವ್ಯ ಉದ್ದೇಶ ಶೇ. 0.6, ವಾಣಿಜ್ಯ ಉದ್ದೇಶ ಶೇ.1, ಖಾಲಿ ನಿವೇಶನಕ್ಕೆ ಶೇ. 0.2 ಆಸ್ತಿತೆರಿಗೆ ವಿಧಿಸಲು ತೀರ್ಮಾನ ಕೈಗೊಳ್ಳಲಾಗಿದೆ, ಇದು ಸರಕಾರದ ಗೈಡ್ ಲೈನ್ಸ್ ಆದ ಕಾರಣ ಎಲ್ಲಾ ಸ್ಥಳೀಯ ಸಂಸ್ಥೆಗಳ0ತೆ ನಮ್ಮ ಪುರಸಭೆ ಯಲ್ಲಿ ಕೂಡ ಜಾರಿಗೊಳಿಸಲಾಗಿದೆ ಎಂದವರು ಹೇಳಿದರು. ನೀರಿನ ದರ ಪರಿಷ್ಕರಣೆಯನ್ನು ಸದ್ಯಕ್ಕೆ ತಡೆಹಿಡಿದಿದ್ದು, ಯಥಾಸ್ಥಿತಿಯಲ್ಲಿ ಮುಂದುವರಿಯಲು ನಿರ್ಣಯಿಸಲಾಯಿತು.
ತೆರಿಗೆ ಪರಿಷ್ಕರಣೆ ಕುರಿತು ಎಸ್.ಡಿ.ಪಿ.ಐ. ವಿರೋಧ ವ್ಯಕ್ತಪಡಿಸಿ ಲಿಖಿತ ಪತ್ರವನ್ನೂ ನೀಡಿತು. ಎಸ್.ಡಿ.ಪಿ.ಐ. ಸದಸ್ಯೆ ಝೀನತ್ ಫಿರೋಜ್ ತೆರಿಗೆ ಹೆಚ್ಚಳವನ್ನು ಬಲವಾಗಿ ಆಕ್ಷೇಪಿಸಿ,ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ತಮ್ಮ ಪಕ್ಷದ ಪರವಾಗಿ ಲಿಖಿತ ವಿರೋಧ ದಾಖಲಿಸಿದರು. ನೀರಿನ ದರ ಪರಿಷ್ಕರಣೆ ಕುರಿತಂತೆ ಶಾಸಕ ರಾಜೇಶ್ ನಾಯ್ಕ್ ಅವರು ಆಡಳಿತಾಧಿಕಾರಿಯವರ ಕಾಲದಲ್ಲಿ ನೀರಿನ ದರ ಏರಿಕೆಯನ್ನು ತಡೆ ಹಿಡಿಯುವಂತೆ ಸಹಾಯಕ ಕಮಿಷನರ್ ಗೆ ಬರೆದಿರುವ ಪತ್ರದ ಆಧಾರದಲ್ಲಿಯೇ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಂಡ ಬಳಿಕ ದರ ಪರಿಷ್ಕರಿಸಲು ನಿರ್ಣಯ ಕೈಗೊಳ್ಳಲಾಯಿತು.
ಪುರಸಭೆಯ ಸಿಬ್ಬಂದಿಗಳನ್ನು ಬಿಪಿಎಲ್ ಪಡಿತರ,ಶಿಕ್ಷಣ ವಂಚಿತ ಮಕ್ಕಳ ಸರ್ವೇ ಸಹಿತ ಅನ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ಸಂಸ್ಕರಣೆ ವಿಚಾರ ಮತ್ತೆ ಪ್ರತಿಧ್ವನಿಸಿತು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ವೇದಿಕೆಯಲ್ಲಿದ್ದರು. ಸದಸ್ಯರಾದ ಎ.ಗೋವಿಂದ ಪ್ರಭು, ಪಿ. ರಾಮಕೃಷ್ಣ ಆಳ್ವ, ಹರಿಪ್ರಸಾದ್, ಮೊಹಮ್ಮದ್ ನಂದರಬೆಟ್ಟು, ವಿದ್ಯಾವತಿ, ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಲುಕ್ಮಾನ್, ಶಶಿಕಲಾ, ಮೊನೀಶ್ ಆಲಿ ಮೊದಲಾದವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.