ಬಂಟ್ವಾಳ: ಪಂಜಿಕಲ್ಲಿನ ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ಮಾರ್ಚ್ 21ರಂದು ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿಕರ ಜಾಗೃತಿ ಸಮಾವೇಶವನ್ನು ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಮತ್ತು ದಿಶಾ ಟ್ರಸ್ಟ್ ಕೈಕಂಬ ಮಂಗಳೂರು ಆಶ್ರಯದಲ್ಲಿ ಪ್ರಾಕೃತಿಕ ಸಂಪತ್ತು ಸಂರಕ್ಷಣೆಯ ಅಂಗವಾಗಿ ಆಯೋಜಿಸಲಾಗಿದೆ.
ಈ ವಿಷಯವನ್ನು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದಿಶಾ ಟ್ರಸ್ಟ್ ಅಧ್ಯಕ್ಷೆ ಡಾ. ಐರಿನ್ ವೇಗಸ್ ತಿಳಿಸಿದರು. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಭತ್ತದ ತಳಿ ಸಂರಕ್ಷಕ ಬಿ.ಕೆ.ದೇವರಾವ್ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಸಹಿತ ಗಣ್ಯರು ಉಪಸ್ಥಿತರಿರುವರು. ಅಡಕೆ ತೋಟ ನಿರ್ವಹಣೆ, ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ನರೇಗಾ ಪಾತ್ರ, ಮಣ್ಣು, ನೀರು ಜೈವಿಕ ಸೊತ್ತು ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ರೈತರ ಅನುಭವ ಹಂಚಿಕೆ ಕುರಿತ ವಿಚಾರಗೋಷ್ಠಿಗಳು ಇರಲಿವೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಗಣ್ಯರು ಭಾಗವಹಿಸುವರು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಹರ್ಷೇಂದ್ರ ಹೆಗ್ಡೆರ, ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ ತಾರಿಪಡ್ಪು, ಕೋಶಾಧಿಕಾರಿ ಸಿಲ್ವೆಸ್ಟರ್ ಡಿಸೋಜ, ಉಪಾಧ್ಯಕ್ಷೆ ರೂಪಾ ಎಲ್. ಶೆಟ್ಟಿ, ದಿಶಾ ಟ್ರಸ್ಟ್ ಕಾರ್ಯದರ್ಶಿ ಡಾ. ಮಹಮ್ಮದ್ ಗುತ್ತಿಗಾರ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.