ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ
ಬಂಟ್ವಾಳ: ತೈಲ ಬೆಲೆ ಏರಿಕೆ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ನ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ವತಿಯಿಂದ ವಿಭಿನ್ನ ಪ್ರತಿಭಟನೆ ಸೋಮವಾರ ನಡೆಯಿತು. ಮೆರವಣಿಗೆಯಲ್ಲಿ ಸೈಕಲ್ ಜೊತೆಗೆ ಕತ್ತೆಯನ್ನು ಸಾಂಕೇತಿಕವಾಗಿ ಬಳಸಿದರೆ,ಮಾಜಿ ಸಚಿವ ಬಿ.ರಮಾನಾಥ ರೈ ಅವರು ಎತ್ತಿನಗಾಡಿಯನ್ನೇ ಹೊತ್ತುಕೊಂಡು ಪಾದಯಾತ್ರೆ ಮಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಭಯ ಬ್ಲಾಕ್ ಗಳ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಲ್ನಡಿಗೆ ಜಾಥಾ ಮತ್ತು ಧರಣಿ ಸತ್ಯಾಗ್ರಹ ಸಂದರ್ಭ ಬೆಲೆ ಏರಿಕೆಯ ತಾಪದಿಂದಾಗಿ ವಾಹನಗಳನ್ನು ಬಳಕೆ ಮಾಡುವ ಬದಲು ಹಿಂದಿನ ಕಾಲದಂತೆ ಕತ್ತೆಯಲ್ಲಿ ವಸ್ತುಗಳನ್ನು ಹೇರಿಕೊಂಡು ಬಂದರೆ, ಎತ್ತಿನಗಾಡಿಯನ್ನು ಸ್ವತಃ ರೈ ಅವರೇ ಹೊತ್ತುಕೊಂಡು ಗಮನ ಸೆಳೆದರು. ಕಟ್ಟಿಗೆಯ ಒಲೆಯಲ್ಲಿ ಗಂಜಿಯೂಟವನ್ನು ತಯಾರಿಸಿ ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ತಿಳಿಯಪಡಿಸುವ ಕಾರ್ಯ ನಡೆಯಿತು.
ಇದೇ ವೇಳೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಧೀರ್ ಕುಮಾರ್ ಮುರೊಳ್ಳಿ, ಇಂದು ಮತ್ತೆ ಗ್ಯಾಸ್ ಬೆಲೆ 25 ರೂ ಜಾಸ್ತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಕಳಚುವ ಕಾರ್ಯ ಕಾಂಗ್ರೆಸ್ ನಿಂದ ಆಗುತ್ತಿದೆ. ಮೋದಿ ಭಕ್ತರೂ ಈಗ ಹೇಳಲೂ ಆಗದೆ, ಮೌನಾಚರಣೆಯಲ್ಲಿ ತೊಡಗಿದ್ದಾರೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸಿದರು. ಈ ಸಂದರ್ಭ ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪ್ರಮುಖರಾದ ಜಯಂತಿ ಪೂಜಾರಿ, ಪದ್ಮನಾಭ ರೈ, ಸುದರ್ಶನ ಜೈನ್, ಜೋಸ್ಫಿನ್ ಡಿಸೋಜ, ಸದಾಶಿವ ಬಂಗೇರ, ಮಧುಸೂಧನ ಶೆಣೈ, ವೆಂಕಪ್ಪ ಪೂಜಾರಿ, ಮಹಮ್ಮದ್ ನಂದಾವರ, ಜನಾರ್ದನ ಚೆಂಡ್ತಿಮಾರ್, ಲೋಲಾಕ್ಷ, ಗಂಗಾಧರ ಪೂಜಾರಿ, ಮಹಮ್ಮದ್ ನಂದರಬೆಟ್ಟು, ವಾಸು ಪೂಜಾರಿ, ಮಂಜುಳಾ ಕುಶಲ ಪೆರಾಜೆ, ಸಹಿತ ತಾಪಂ, ಪುರಸಭೆ ಸದಸ್ಯರು, ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.