ಬಂಟ್ವಾಳ: ಬಂಟ್ವಾಳದ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ಬಂಟ್ವಾಳ ಜಿ.ಎಸ್.ಬಿ.ಯುವಕರು ಬಳಗದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಪೊಲೀಸ್ ಸಿಬ್ಬಂದಿ ಉದಯ ರೈ ಮಂದಾರ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ಪೊಲೀಸರು ಹಗಲು ರಾತ್ರಿ ಎನ್ನದೆ ಜನರಿಗೋಸ್ಕರ ದುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಮತ್ತಷ್ಟು ಆಪ್ತರಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಪ್ರತಿ ಊರಿನಲ್ಲೂ ಒಳ್ಳೆಯದು ಇದೆ, ಕೆಟ್ಟದಿದೆ. ಅವುಗಳನ್ನು ಸರಿಯಾಗಿ ನಿಭಾಯಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜಿ.ಎಸ್.ಬಿ. ಸಮುದಾಯ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದು, ಪೊಲೀಸ್ ವ್ಯವಸ್ಥೆಗೆ ಉತ್ತಮ ಸಹಕಾರ ನೀಡುತ್ತಿದೆ ಎಂದರು.
ಉದಯ ರೈ ಮಂದಾರ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕೆಲವು ತಿಂಗಳುಗಳ ಕಾಲದ ಮನೆಗೂ ತೆರಳದೆ, ಹಗಲು ರಾತ್ರಿ ಎಂಬ ಸಮಯದ ಪರಿಮಿತಿ ಇಲ್ಲದೆ ಕರ್ತವ್ಯ ಸಲ್ಲಿಸಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಊರ ಜನರು ನೀಡುವ ಪ್ರೋತ್ಸಾಹ ಮತ್ತಷ್ಟು ಕೆಲಸ ಮಾಡಲು ಹುರಿದುಂಬಿಸುತ್ತದೆ ಎಂದರು.
ವೇದಿಕೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರಸನ್ನ, ಟ್ರಾಫಿಕ್ ಉಪನಿರೀಕ್ಷಕ ರಾಜೇಶ್ ಉಪಸ್ಥಿತರಿದ್ದರು. ಗಿರೀಶ್ ಪೈ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಹಿರಿಯರಾದ ಶಿವಾನಂದ ಬಾಳಿಗಾ ವಂದಿಸಿದರು. ಶ್ರೀಕಲಾ ಗೌತಮ್ ಪೈ ಕಾರ್ಯಕ್ರಮ ನಿರೂಪಿಸಿದರು. ಕೆ. ಸದಾಶಿವ ಪ್ರಭು, ಅಭಿಜಿತ್ ಶೆಣೈ, ಅವಿನಾಶ್ ಕಾಮತ್ ಸಹಕರಿಸಿದರು.