ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ವಲಯ ಸಮಿತಿ ವತಿಯಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ಧ ಸಂಭ್ರಮ ಹಿನ್ನೆಲೆಯಲ್ಲಿ ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಬರಿಮಾರು, ಕಡೇಶಿವಾಲಯ, ಕೆದಿಲ, ಪೆರ್ನೆ ಹಾಗೂ ಬಿಳಿಯೂರು ಭಾಗಗಳ ಜ್ಞಾನವಾಹಿನಿ ಸರಣಿ ಕಾರ್ಯಕ್ರಮಗಳಿಗೆ ನೇರಳಕಟ್ಟೆ ಶ್ರೀ ಗಣೇಶೋತ್ಸವ ಸಮಿತಿ ಗಣೇಶ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳು, ಮರ್ಯಾದಾ ಪುರುಷ ಶ್ರೀ ರಾಮನ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಉತ್ತಮ ಸಂಸ್ಕಾರಗಳನ್ನು ಅನುಭವಿಸುವುದರೊಂದಿಗೆ ಸುಖೀ ಜೀವನವನ್ನು ನಡೆಸಬಹುದು ಎಂದರು. ಷಷ್ಠ್ಯಬ್ದ ಸಂಭ್ರಮದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಸುರೇಶ ರೈ ಮಕರಜ್ಯೋತಿ, ತಾಲೂಕು ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ಗುರುದಾಸ್ ಮಂಗಳೂರು ಇವರಿಂದ ಹರಿಕಥಾ ಸತ್ಸಂಗ ಹನೂಮಭಕ್ತಿ ನಡೆಯಿತು.
ನೇರಳಕಟ್ಟೆ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಾಮಚಂದ್ರ ಮಾಸ್ಟರ್, ಕಾರ್ಯದರ್ಶಿ ವಿಠಲ ನಾಯ್ಕ್, ವಲಯ ಸಮಿತಿಯ ಕಾರ್ಯಾಧ್ಯಕ್ಷ ಸನತ್ ರೈ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಹೆಗ್ಡೆ ಸತ್ತಿಕಲ್ಲು, ಕೋಶಾಧಿಕಾರಿ ಬೇಬಿ ನಾಯ್ಕ್ ನೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.ವಲಯ ಸಮಿತಿಯ ಅಧ್ಯಕ್ಷ ಉಗ್ಗಪ್ಪ ಶೆಟ್ಟಿ, ಕೊಂಬಿಲ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಆಳ್ವ, ಕೊಡಾಜೆ ವಂದಿಸಿದರು. ನರಸಿಂಹ ಶೆಟ್ಟಿ ಮಾಣಿ ಕಾರ್ಯಕ್ರಮ ನಿರೂಪಿಸಿದರು.