ಜಾಲತಾಣಗಳ ಸದ್ಬಳಕೆಗೆ ಸಮ್ಮೇಳನಾಧ್ಯಕ್ಷ ಡಾ.ಸುರೇಶ ನೆಗಳಗುಳಿ ಕರೆ
ಹರೀಶ ಮಾಂಬಾಡಿ ಬಂಟ್ವಾಳನ್ಯೂಸ್
ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ವೇದಿಕೆ
ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಘಟಕ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಉದ್ಘಾಟಿಸಿದರು.
ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಹಿರಿಯ ಸಾಹಿತಿ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷೆ ಡಾ.ಧರಣೀದೆರವಿ ಮಾಲಗತ್ತಿ,
ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಮನ್ನಣೆ ಅಗತ್ಯ ಎಂದು ಹೇಳಿದರು.
ಯಕ್ಷಗಾನದ ಒಂದೊಂದು ಪ್ರಸಂಗವೂ ಮಹಾಕಾವ್ಯವೇ. ದಕ್ಷಿಣ ಕನ್ನಡ ಜಿಲ್ಲೆಯ ಹೊರಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗನಕ್ಕೆ ಪ್ರಾಧಾನ್ಯತೆ ದೊರಕುವ ಕುರಿತು ಗಮನ ಹರಿಸಬೇಕು ಎಂದರು.
ಅಧ್ಯಕ್ಷ ಭಾಷಣ ಮಾಡಿದ ಡಾ.ನೆಗಳಗುಳಿ ಸಾಹಿತ್ಯದ ಉತ್ಕೃಷ್ಟತೆಯ ಕುರಿತು ಅನುಮಾನಗಳಿದ್ದರೂ ಗಝಲ್ ಗಳ ರಚನೆಗಳು ಕೋವಿಡ್ ಕಾಲದಲ್ಲಿ ಹೆಚ್ಚಾಗಿ ಕಂಡುಬಂದವು. ಪತ್ರಿಕೋದ್ಯಮದಲ್ಲೂ ಪಕ್ವ ಸಾಹಿತಿಗಳು ಬೇಕು ಎಂದರು. ಜಾಲತಾಣದ ಬಳಗಗಳು ಸಾಹಿತ್ಯ ರಚನೆಗೆ ಸ್ಫೂರ್ತಿ ಕೊಡುತ್ತಿವೆ ಎಂದರು.
ನಿವೇದನೆ ಎಂಬ ಸ್ಮರಣ ಸಂಚಿಕೆಯನ್ನು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಬಿಡುಗಡೆಗೊಳಿಸಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಕಸಾಪ ತಾಲೂಕಿನ ಗೌರವ ಕಾರ್ಯದರ್ಶಿಗಳಾದ ಡಾ.ನಾಗವೇಣಿ ಮಂಚಿ, ರವೀಂದ್ರ ಕುಕ್ಕಾಜೆ, ಸ್ಮರಣ ಸಂಚಿಕೆಯ ಸಂಪಾದಕರಾದ ಮಹಾಬಲೇಶ್ವರ ಹೆಬ್ಬಾರ, ರಮಾನಂದ ನೂಜಿಪ್ಪಾಡಿ ಇದ್ದರು. ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ನುಡಿಗಳನ್ನು ಆಡಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ ಉಪಸ್ಥಿತರಿದ್ದರು.
ಬಾಲಕೃಷ್ಣ ಆಳ್ವ ಕೊಡಾಜೆ, ಮಹೇಶ್ ವಿ.ಕರ್ಕೇರ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಗೀತಾ ಕೋಂಕೋಡಿ, ರವಿಕುಮಾರ್ ನಿರ್ವಹಿಸಿದರು. ಪಲ್ಲವಿ ಕಾರಂತ ವಂದಿಸಿದರು.