ಬಂಟ್ವಾಳ

ಫಾಸ್ಟ್ ಟ್ಯಾಗ್ ಕಡ್ಡಾಯ: ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ವಾಹನಗಳ ದಟ್ಟಣೆ ಹೆಚ್ಚಳ

ಬಂಟ್ವಾಳ: ಸೋಮವಾರ ಮಧ್ಯರಾತ್ರಿಯಿಂದ ಫಾಸ್ಟ್ ಟ್ಯಾಗ್ ಕಡ್ಡಾಯದ ನಿಯಮ ಜಾರಿಯಾದುದರ ಪರಿಣಾಮ ಬ್ರಹ್ಮರಕೂಟ್ಲು ಟೋಲ್ ಬೂತ್ ನಲ್ಲಿ ಮಂಗಳೂರಿನಿಂದ ಬರುವ ವಾಹನಗಳ ಸರತಿಸಾಲು ಜಾಸ್ತಿಯಾಗಿದೆ. ಫಾಸ್ಟ್ ಟ್ಯಾಗ್ ಕಡ್ಡಾಯ ಇಲ್ಲದೇ ಇದ್ದಾಗಲೂ ಈ ಭಾಗದಲ್ಲಿ ಸಾಲು ಕಡಿಮೆ ಏನೂ ಇರಲಿಲ್ಲ, ಈಗ ಇನ್ನಷ್ಟು ಹೆಚ್ಚಾಗಿದೆ.

 ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ, ಆಟೊ ವಾಹನಗಳ ಸಂಚಾರಕ್ಕೂ ಕಷ್ಟವಾಗುವ ಕಾರಣ ಟೋಲ್ ಕಟ್ಟುವ ವಾಹನಗಳ ಜತೆಗೆ ಇತರ ವಾಹನಗಳೂ ಹೆದ್ದಾರಿಯಲ್ಲೇ ಸಂಚರಿಸಬೇಕಾದ ಕಾರಣ ಮತ್ತೂ ಸಮಸ್ಯೆಯಾಗಿದೆ. ಬ್ರಹ್ಮರಕೂಟ್ಲುವಿಗೆ ರಾಮಲ್ ಕಟ್ಟೆಯಿಂದ ಸಾಗುವ ಸರ್ವಿಸ್ ರಸ್ತೆ (ಹಿಂದೆ ಅದೇ ಹೆದ್ದಾರಿ ಆಗಿತ್ತು)ಯ ರಿಪೇರಿ ಕಾರ್ಯಗಳು  ನಡೆಯುತ್ತಿರುವ ಕಾರಣ ಅಲ್ಲಿ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ವಾಹನಗಳೂ ಇಕ್ಕಟ್ಟಿನ ಟೋಲ್ ಗೇಟ್ ಬಳಿ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ. ಫಾಸ್ಟ್ ಟ್ಯಾಗ್ ನ ಉದ್ದೇಶ ಟೋಲ್ ಸಂಗ್ರಹದ ವೇಳೆ ಸಮಯ ವ್ಯರ್ಥವಾಗಬಾರದು ಎಂದು,ಆದರೆ ಇಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಒಂದೆಡೆ ಟೋಲ್ ಗಳನ್ನೇ ತೆಗೆಯುವ ಮಾತುಗಳು ಕೇಳಿಬರುತ್ತಿದ್ದರೆ, ಅಗಲ ಕಿರಿದಾದ ಜಾಗದಲ್ಲಿ ಸ್ಥಾಪನೆಗೊಂಡ ಬ್ರಹ್ಮರಕೂಟ್ಲು ಟೋಲ್ ಮುಂದೆ ವಾಹನಗಳು ದುಬಾರಿ ಇಂಧನವನ್ನು ಅನಗತ್ಯವಾಗಿ ವ್ಯಯ ಮಾಡುವಂತಾಗಿದೆ.

NEWSDESK

Recent Posts