Uncategorized

ಹೊಕ್ಕಾಡಿಗೋಳಿ: ವೀರ-ವಿಕ್ರಮ ಕಂಬಳಕ್ಕೆ ರೂ 11ಲಕ್ಷ ದೇಣಿಗೆ

ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರೂ 11ಲಕ್ಷ ಮೊತ್ತದ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಈಚೆಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ. ರೂ 11ಲಕ್ಷ ಮೊತ್ತದ ದೇಣಿಗೆ ಚೆಕ್ಕನ್ನು ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಇವರಿಗೆ ಹಸ್ತಾಂತರಿಸಿದರು.

ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಅಂದು ಅವರು ಮಾತನಾಡಿ, ಈ ಕಂಬಳಕ್ಕೆ ರೂ 11ಲಕ್ಷ ಮೊತ್ತದ ವೈಯಕ್ತಿಕ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸಿ ಜಿಲ್ಲೆಯ ಎಲ್ಲಾ ಕಂಬಳಗಳಿಗೆ ಅನುದಾನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಅವರು ಭರವಸೆ ನೀಡಿ ಕೇವಲ ಎರಡು ವಾರದೊಳಗೆ ದೇಣಿಗೆ ಚೆಕ್ ಹಸ್ತಾಂತರಿಸಿರುವುದು ಇಲ್ಲಿನ ಕಂಬಳಾಸಕ್ತರಲ್ಲಿ ಮತ್ತಷ್ಟು ಸಂತಸಕ್ಕೆ ಕಾರಣವಾಗಿದೆ.

ಬಿಜೆಪಿ ಯುವ ಮುಖಂಡ ಆಶ್ರಿತ್ ನೋಂಡಾ ಅಡ್ಯಾರುಗುತ್ತು, ಕಂಬಳ ಸಮಿತಿ ಕಾರ್ಯದರ್ಶಿ ಪ್ರಣೀತ್ ಹಿಂಗಾಣಿ, ಸುಧೀಶ್ ಭಟ್ ಧರ್ಮಸ್ಥಳ ಜೊತೆಗಿದ್ದರು. ಗ್ರಾಮೀಣ ಕೃಷಿಕರನ್ನು ಹೊಂದಿರುವ ಹೊಕ್ಕಾಡಿಗೋಳಿ ಕಂಬಳಕ್ಕೆ ಹೊಸ ರೂಪ ನೀಡುವುದರ ಜೊತೆಗೆ ವಿವಿಧ ಮೂಲಭೂತ ಸೌಕರ್ಯ ಒದಗಿಸಿ, ವೀಕ್ಷಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಗ್ಯಾಲರಿ ನಿರ್ಮಿಸಲು ಸ್ಥಳೀಯ ಸ್ಥಳದಾನಿಗಳ ಜೊತೆಗೆ ಮಾತುಕತೆ ನಡೆಸಿದ ಬಳಿಕ ಕಂಬಳ ಸಮಿತಿ ಮುನ್ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಪ್ರತಿಕ್ರಿಯಿಸಿದ್ದಾರೆ.

NEWSDESK

Recent Posts