ಬಂಟ್ವಾಳ: ಮನೆ ಮನೆಗೆ ಕಸ ವಿಲೇವಾರಿಗೆ ಸಂಬಂಧಿಸಿ ತ್ಯಾಜ್ಯ ಸಂಗ್ರಹಣೆಗೆ ವಾಹನಗಳು ಮನೆ ಬಾಗಿಲಿಗೆ ಬರುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ಸಮಸ್ಯೆಗಳನ್ನು ಪರಿಹರಿಸಿ, ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಜನರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುತ್ತದೆ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಹೇಳಿದರು.
ಬಂಟ್ವಾಳ ಪುರಸಭೆಯ ಮುಂಗಡಪತ್ರ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸೋಮವಾರ ನಡೆದ ಸಂಘ, ಸಂಸ್ಥೆಗಳ ಅಧ್ಯಕ್ಷರು, ನಾಗರಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ಜನರು ಎಲ್ಲಿ ಕಸ ಬಿಸಾಡಿದರೂ ಟ್ಯಾಕ್ಸ್ ಕಟ್ಟಲೇಬೇಕು, ಹಾಗಿದ್ದ ಮೇಲೆ ಮನೆ ಮನೆಗೆ ವಾಹನಗಳು ಬಂದಾಗ ಅವುಗಳಿಗೆ ನೀಡಬಹುದು ಎಂದು ಅಧ್ಯಕ್ಷರು ತಿಳಿಸಿದರು. ಮೊಡಂಕಾಪು ರಾಜಪಲ್ಕೆ ಪರಿಸರದಲ್ಲಿ ತ್ಯಾಜ್ಯ ಸಾಗಾಟದ ವಾಹನಗಳು ಬರುವುದಿಲ್ಲ ಎಂದ ಅಹವಾಲುಗಳು ಕೇಳಿಂದರೆ, ಕೆಲವೆಡೆ ನಿಯಮಿತವಾಗಿ ವಾಹನಗಳು ಸಾಗುವ ಕುರಿತು ಮಾಹಿತಿ ಬಂತು. ಕಸ ವಿಲೇವಾರಿಗೆ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪುರಸಭೆಯ ಎಲ್ಲ ಪ್ರದೇಶಗಳಿಂದಲೂ ತ್ಯಾಜ್ಯ ಸಂಗ್ರಹಣೆಯನ್ನು ಕಟ್ಟುನಿಟ್ಟಾಗಿ ಮಾಡಿ ಸುಂದರ ಬಂಟ್ವಾಳ ರೂಪಿಸಲು ಯತ್ನಿಸಲಾಗುವುದು. ತ್ಯಾಜ್ಯ ಅಲ್ಲಲ್ಲಿ ಎಸೆಯದಿರುವಂತೆ ಜನಜಾಗೃತಿ ಮೂಡಿಸಲಾಗುವುದು ಇದಕ್ಕೆ ನಾಗರಿಕರ ಸಹಕಾರ ಅಗತ್ಯ ಎಂದು ಅಧ್ಯಕ್ಷರು ಹೇಳಿದರು.
ತರಕಾರಿ ವ್ಯಾಪಾರಗಳಿಂದ ಪಾದಚಾರಿಗಳಿಗೆ ಅಡ್ಡಿ ಉಂಟಾಗುವುದು, ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದು, ಆಯಕಟ್ಟಿನ ಜಾಗಗಳಲ್ಲಿ ಕ್ಯಾಮರಾ ಅಳವಡಿಸುವುದು, ಮೇಲ್ಕಾರ್ ಪ್ರದೇಶದಲ್ಲಿ ಬಸ್ ನಿಲ್ದಾಣ ಸಹಿತ ಮೂಲಸೌಕರ್ಯ ವೃದ್ಧಿ, ಸಂಚಯಗಿರಿ, ಸಹಿತ ಹಲವು ಪ್ರದೇಶಗಳಲ್ಲಿ ಕೆಲವೆಡೆ ಸಾರ್ವಜನಿಕ ನೀರು ಸರಬರಾಜು ಪೈಪುಗಳಿಂದ ನೀರು ಸೋರಿಕೆ ಆಗುವುದು ಮೊದಲಾದ ವಿಷಯಗಳು ಪ್ರಸ್ತಾಪಗೊಂಡವು.
ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮಾತನಾಡಿ ಎಲ್ಲ ವಿಚಾರಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಬಜೆಟ್ ನಲ್ಲಿ ಅಳವಡಿಸುವ ಕುರಿತು ಪ್ರಯತ್ನಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ಜೆಸಿಂತಾ ಡಿಸೋಜ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಮೆನೇಜರ್ ಲೀಲಾವತಿ ಸಿಬ್ಬಂದಿಗಳಾದ ರಝಾಕ್, ಸನ್ನಿ ವಿಲ್ಸನ್ ಲೊಬೊ, ಸಾರ್ವಜನಿಕ ಪ್ರತಿನಿಧಿಗಳಾದ ವಸಂತಿ ಗಂಗಾಧರ್, ದಾಮೋದರ ಸಂಚಯಗಿರಿ, ಶಿವಶಂಕರ್ ಕೈಕುಂಜೆ, ಮಹಾಬಲೇಶ್ವರ ಹೆಬ್ಬಾರ, ನಾರಾಯಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ಒದಗಿಸಿದರು.