ಬಂಟ್ವಾಳ: ರಾಷ್ಟ್ರೀಯ ಕ್ರೀಡಾ ಸಾಧಕಿ ರಮ್ಯಶ್ರೀ ಜೈನ್ ಇವರಿಗೆ ಸಿದ್ಧಕಟ್ಟೆಯಲ್ಲಿ ಅದ್ದೂರಿಯ ಸ್ವಾಗತ ಕಾರ್ಯಕ್ರಮ ನಡೆಯಿತು. ರಮ್ಯಶ್ರೀ ಜೈನ್, ಅಸ್ಸಾಂನ ಗುವಾಹಟಿಯಲ್ಲಿ ಫೆ.9 ರಂದು ನಡೆದ “36ನೇ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-2021” ರಲ್ಲಿ ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ಗಳಿಸಿದ್ದರು. ಕ್ರೀಡಾ ಸಾಧಕಿಯನ್ನು ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಳದಿಂದ ಗುಣಶ್ರೀ ವಿದ್ಯಾಲಯದವರೆಗೆ ತೆರೆದ ವಾಹನದಲ್ಲಿ-ಅದ್ದೂರಿ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
“ಪ್ರಸಕ್ತ ಸ್ಪರ್ಧಾತ್ಮಕ ಸಮಾಜದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸರ್ಕಾರವು ಸ್ಪಂದಿಸಿ, ತ್ವರಿತ ನೆರವು ಮತ್ತಿತರ ಮೂಲಭೂತ ಸೌಕರ್ಯ ಒದಗಿಸಿದಾಗ ಅವರಿಂದ ಅಪ್ರತಿಮ ಸಾಧನೆ ಮೂಡಿ ಬರುತ್ತದೆ” – ಎಂದು ಮನ್ ದೇವ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದರು. ಗುಣಶ್ರೀ ವಿದ್ಯಾಲಯ ಮತ್ತು ನಾಗರಿಕರ ವತಿಯಿಂದ ಕ್ರೀಡಾ ಸಾಧಕಿ ರಮ್ಯಶ್ರೀ ಜೈನ್ ಇವರ ಅಭಿನಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜೈನ್ ಮಿಲನ್ ವಲಯ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ನಿವೃತ್ತ ಮುಖ್ಯಶಿಕ್ಷಕ ದಾಮೋದರ ರಾವ್, ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಜೈನ್, ಡಾ.ಕೃಷ್ಣಮೂರ್ತಿ, ಸಂಗಬೆಟ್ಟು ಕ್ಷೇತ್ರದ ಪ್ರಧಾನ ಅರ್ಚಕ ಪ್ರಭಾಕರ ಐಗಳ್, ಚಂದ್ರಹಾಸ ಗುರಿಕಾರ, ನಿವೃತ್ತ ಅರಣ್ಯಾಧಿಕಾರಿ ದಾಮೋದರ ಶೆಟ್ಟಿಗಾರ್ ಮತ್ತಿತರರು ಶುಭ ಹಾರೈಸಿದರು.
ಶಾಲಾ ಸಂಚಾಲಕ ವಿಜಯ ಕುಮಾರ್ ಚೌಟ, ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ ಪೂಜಾರಿ ಹಲೆಕ್ಕಿ, ಸದಸ್ಯರಾದ ಸಂದೇಶ ಶೆಟ್ಟಿ ಪೊಡುಂಬ, ಉದಯ ಕುಮಾರ್, ಸುರೇಶ್, ಉದ್ಯಮಿ ಹೇಮಚಂದ್ರ ಶೆಟ್ಟಿಗಾರ್, ಪ್ರಗತಿಪರ ಕೃಷಿಕ ರವೀಂದ್ರ ಜೈನ್ ಮಾಲ್ದಾಡು ಮತ್ತು ಪದ್ಮಶ್ರೀ ಆರ್.ಜೈನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಬಿತಾ ಲವಿನಾ ಪಿಂಟೋ ಅತಿಥಿಗಳನ್ನು ಸ್ವಾಗತಿಸಿದರು, ಪ್ರಾಂಶುಪಾಲೆ ಲಾವಣ್ಯ ವಂದಿಸಿದರು.