ಬಂಟ್ವಾಳ

ಬಂಟ್ವಾಳದ ಮಾಣಿಮಠದಲ್ಲಿ ವಿಷ್ಣುಗುಪ್ತ ವಿವಿ ಶಾಖೆ: ರಾಘವೇಶ್ವರಶ್ರೀ

ಬಂಟ್ವಾಳ: ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಾಖೆಯಾಗಿ ಮಾಣಿಮಠದ ಶ್ರೀರಾಮ ವೇದಪಾಠಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಘೋಷಿಸಿದರು.

ಮಾಣಿ ಮಠ ಸ್ಥಾಪನೆಯ ಮಂಡಲೋತ್ಸವ ಹಾಗೂ 48ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

“ಕೃಷ್ಣ ಯಜುರ್ವೇದದ ಪರಿಪೂರ್ಣ ಬೋಧನೆಯ ಜೊತೆಗೆ ಆಧುನಿಕ ಶಿಕ್ಷಣ, ಭಾರತೀಯ ವಿದ್ಯೆ, ಕಲೆಗಳು ಮತ್ತು ವೇದಾಭ್ಯಾಸವನ್ನು ಇಲ್ಲಿ ಕಲಿಸಿ ಸಮಗ್ರ ಜೀವನ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆಸಲಾಗುವುದು. ಮಠದ ಈ ಪ್ರಯತ್ನಕ್ಕೆ ಸಮಾಜದ ಸ್ಪಂದನೆ ವಿಶೇಷವಾಗಿ ಅಗತ್ಯ. ಹವ್ಯಕ, ಹಾಲಕ್ಕಿ, ಮುಕ್ರಿ ಸಮಾಜದಂಥ ವಿಶಿಷ್ಟ ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ” ಎಂದು ಶ್ರೀಗಳು ಹೇಳಿದರು.

ಜಾಹೀರಾತು

ಕಳೆದ ಮೂರು ದಿನಗಳಿಂದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಮಾಜದಿಂದ ದೊಡ್ಡ ಸಮರ್ಪಣೆಯಾಗಿದ್ದು, ಸಹಸ್ರಮಾನದ ಕಾರ್ಯಕ್ಕೆ ಸಮಾಜದಿಂದ ವ್ಯಕ್ತವಾಗುತ್ತಿರುವ ಸ್ಪಂದನೆ ಅನನ್ಯ ಎಂದರು. ಮಂಡಲೋತ್ಸವ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಬಹಳಷ್ಟು ಶಿಷ್ಯರು ರಾಮನೈವೇದ್ಯಕ್ಕಾಗಿ ವಿಶೇಷವಾಗಿ ಭತ್ತ ಬೆಳೆಯುತ್ತಿದ್ದು, ಭತ್ತದ ಭಕ್ತಿ ಅನನ್ಯ ಎಂದು ಬಣ್ಣಿಸಿದರು. ರಾಮನೈವೇದ್ಯಕ್ಕೆ ಮುಳ್ಳೇರಿಯಾ ಮಂಡಲದ ಪುಟ್ಟ ಮಕ್ಕಳು ಕೊರೋನಾ ಸಂದರ್ಭದಲ್ಲಿ ಬೆಳೆದ 550 ಕೆ.ಜಿ. ಸಾವಯವ ಅಕ್ಕಿಯನ್ನು ಶ್ರೀಸಂಸ್ಥಾನದವರಿಗೆ ಸಮರ್ಪಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ವರದಿ ವಾಚಿಸಿದರು. ಘನಪಾಠಿಗಳಾದ ಶಂಕರನಾರಾಯಣ ಪಳ್ಳತ್ತಡ್ಕ ಅವರು ರಚಿಸಿದ ‘ವೇದೋನಿತ್ಯಮಧೀಯತಾಮ್’ ಕೃತಿಯನ್ನು ಪರಮಪೂಜ್ಯರು ಲೋಕಾರ್ಪಣೆ ಮಾಡಿದರು.

ರಜತ ಮಂಟಪವನ್ನು ಶ್ರೀರಾಮದೇವರಿಗೆ ಸಮರ್ಪಿಸಲಾಯಿತು. ಕಾರ್ಯಕರ್ತರ ಮಹಾಜಾಗೃತಿಯ ಪ್ರತೀಕವಾಗಿ ರುದ್ರಾಂಶ ಸಂಭೂತ ಹನುಮಂತನಿಗೆ 11 ಬಗೆಯ ವಿಶೇಷ ದ್ರವ್ಯಗಳಿಂದ ವಿಶೇಷ ಮಹಾರುದ್ರಾಭಿಷೇಕ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
NEWSDESK