ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದ ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿದ್ದ ಕೆ.ವಿ.ಸುಬ್ರಾಯ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪುತ್ರ, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಅಧ್ಯಾಪಕ ಕೆ.ಯಸ್. ವೆಂಕಪ್ಪ ಭಟ್ ಮತ್ತು ಸರಸ್ವತಿ ದಂಪತಿಗಳಿಗೆ ಹಿರಿಯ ಮಗನಾಗಿ ದಿನಾಂಕ13-03-1931ರಂದು ತೀರಾ ಹಳ್ಳಿ ಪ್ರದೇಶವಾದ ಚೊಕ್ಕಾಡಿಯ ಅನೆಕಾರ ಎಂಬಲ್ಲಿ ಜನಿಸಿ ಗುರಿ ಸಾಧನೆಯ ಛಲದಿಂದಲೇ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕೆ.ವಿ. ಸುಬ್ರಾಯರು. ತಮ್ಮ ತಂದೆಯವರಂತೆಯೇ ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ವಿಠಲ ಹೈಸ್ಕೂಲ್, ಅಲೋಷಿಯಸ್ ಕಾಲೇಜು-ಹೈಸ್ಕೂಲ್ ಮಂಗಳೂರು, ಉಡುಪಿಯ ಎಂ.ಜಿ.ಎಂ. ಕಾಲೇಜು, ಆಚಾರ್ಯ ಪಾಠಾಶಾಲಾ ಕಾಲೇಜು, ಬೆಂಗಳೂರು, ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಶೃಂಗೇರಿಯ ಶ್ರೀ ಜೆ.ಸಿ.ಬಿ.ಯಂ. ಕಾಲೇಜುಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಆ ಮೇಲೆ 22 ವರ್ಷಗಳ ಕಾಲ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಯಕ್ಷಗಾನವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಸಿಸಿ, ಲೋಪದೋಷಗಳಿಲ್ಲದೆ ಸರ್ವಾಂಗ ಸುಂದರವಾಗಿ ಅಣಿಗೊಳಿಸಿ ಪ್ರೇಕ್ಷಕರ ಮುಂದೆ ಪ್ರದರ್ಶಿಸಬೇಕಾದ ಸುಸಂಸ್ಕೃತ ಕಲಾ ಪ್ರಕಾರ. ಯಕ್ಷಗಾನವನ್ನು ತನ್ನ ಉದಾತ್ತ ಹವ್ಯಾಸವನ್ನಾಗಿ ಸ್ವೀಕರಿಸಿಕೊಂಡ ಕಲೋಪಾಸಕರು ತುಂಬಾ ವಿರಳ. ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಯಕ್ಷಗಾನ ಕಲೆಯ ಮೇಲಿನ ಅಭಿಮಾನದಿಂದ ಪ್ರಸಿದ್ಧ ವೇಷಧಾರಿ ಶ್ರೀ ಕದ್ರಿ ವಿಷ್ಣುರವರ ಶಿಷ್ಯತ್ವವನ್ನು ವಹಿಸಿ, ವೇಷಗಾರಿಕೆಯ ಎಲ್ಲ ಅಂಗಗಳನ್ನು ಸ್ವತಃ ಅಭ್ಯಸಿಸಿ, ವೃತ್ತಿ ಕಲಾವಿದರಿಗೂ ಸರಿಮಿಗಿಲೆನಿಸುವ ರೀತಿಯಲ್ಲಿ ರಂಗ ಪ್ರದರ್ಶನ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಉಪನ್ಯಾಸಕ ವೃತ್ತಿಯ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಾ, ಜತೆಗೇನೆ ಯಕ್ಷಗಾನ ಕಲೆಯ ವೇಷಗಾರಿಕೆ, ನೃತ್ಯಾಭಿನಯ ಮತ್ತು ಮಾತುಗಾರಿಕೆಯ ಶೈಲಿಯನ್ನೂ ಊರ್ಜಿತಗೊಳಿಸುತ್ತಾ ಸವ್ಯಸಾಚಿಯೆಂಬಂತೆ ಸಾಧನೆ ಮಾಡಿ 1963ರಲ್ಲಿ ಹವ್ಯಾಸಿ ಕಲಾವಿದರಾಗಿ ರಂಗ ಪ್ರವೇಶ ಮಾಡಿ, ಶ್ರೀ ದೇವಿ ಮಹಾತ್ಮೆಯ ದೇವೇಂದ್ರನ ಪಾತ್ರ ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಕ್ರಮೇಣ ಹಂತಹಂತವಾಗಿ ಕಲಾ ಪ್ರಾವಿಣ್ಯತೆ ಹೊಂದುತ್ತಾ180ಕ್ಕಿಂತಲೂ ಹೆಚ್ಚಿನ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ದೇವೇಂದ್ರ, ಅರ್ಜುನ, ತಾಮ್ರಧ್ವಜ, ಕರ್ಣ, ಇಂದ್ರಜಿತು, ಅತಿಕಾಯ ಮುಂತಾದ ಪಾತ್ರಗಳಲ್ಲಿ ಮಿಂಚಿ ಮೆರೆದಿರುವುದನ್ನು ಕಲಾಭಿಮಾನಿಗಳು ಇಂದಿಗೂ ಸ್ಮರಿಸುತ್ತಾರೆ. ಶಿಕ್ಷಣ ಮತ್ತು ಯಕ್ಷಗಾನ ಎಂಬ ಉಭಯ ಕ್ಷೇತ್ರಗಳಲ್ಲೂ ಸಾರ್ಥಕ್ಯ ಹೊಂದಿದ್ದರು.
ದಿನಾಂಕ 11-06-1956ರಲ್ಲಿ ದಾಂಪತ್ಯ ಜೀವನವನ್ನು ಪ್ರಾರಂಭಿಸಿ ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಪಡೆದು ಅವರನ್ನು ಸುಸಂಸ್ಕೃತ ವಿದ್ಯಾವಂತರನ್ನಾಗಿಸಿ ಗೃಹಸ್ಥ ಜೀವನಕ್ಕೆ ತಕ್ಕವರನ್ನಾಗಿ ರೂಪಿಸಿದ್ದರು. ಅಖಿಲ ಭಾರತ ಕೀರ್ತಿಯ ಆದರ್ಶ ಗುರುಕುಲ ಸದೃಶವಾದ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುತ್ತಾರೆ. ವಿದ್ಯಾರ್ಥಿಗಳ ಮತ್ತು ಕಲಾಭಿಮಾನಿಗಳ ಅಪಾರ ಅಭಿಮಾನಕ್ಕೆ ಪಾತ್ರರಾಗಿ ಶಿಕ್ಷಣ ಸಂಸ್ಥೆಯ ಘನತೆಯನ್ನು ಹೆಚ್ಚಿಸಿರುತ್ತಾರೆ ಎಂದು ಅಳಿಕೆ ವಿದ್ಯಾಸಂಸ್ಥೆ ಆಡಳಿತ ಸಮಿತಿ ಕಂಬನಿ ಮಿಡಿದಿದೆ.