ಬಂಟ್ವಾಳ: ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ 2021ಕ್ಕೆ ಅದ್ದೂರಿಯ ಚಾಲನೆ ದೊರಕಿದೆ.
ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ವೇದಿಕೆಯಲ್ಲಿ ಕಲೋತ್ಸವ ಗುರುವಾರ ಸಂಜೆ ಆರಂಭಗೊಂಡಿತು.
ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಜಾನಪದ ದಿಬ್ಬಣ ಮೆರವಣಿಗೆಗೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಬಳಿಕ ಮೈದಾನದಲ್ಲಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್, ಗೌರವಾಧ್ಯಕ್ಷ ಪಿ.ಜಯರಾಮ ರೈ, ಗೌರವ ಸಲಹೆಗಾರ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರೀ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ, ಪ್ರಕಾಶ್ ಬಿ.ಶೆಟ್ಟಿ ಶ್ರೀಶೈಲ, ಟಿ.ಶೇಷಪ್ಪ ಮೂಲ್ಯ, ಎಚ್ಕೆ ನಯನಾಡು, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಜಯಾನಂದ ಪೆರಾಜೆ, ರತ್ನದೇವ್ ಪುಂಜಾಲಕಟ್ಟೆ, ವಿವಿಧ ಸಮಿತಿಗಳ ಶೈಲಜಾ ರಾಜೇಶ್, ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು. ಚೆಂಡೆ, ಪಥ ಸಂಚಲನ, ಗೊಂಬೆ ಸಹಿತ ಹಲವು ವೈವಿಧ್ಯಗಳು ನೋಡುಗರ ಗಮನ ಸೆಳೆಯಿತು. ಬಳಿಕ ವೇದಿಕೆಯಲ್ಲಿ ಸಭಾ ಕಾರ್ಯಕ್ರಮಗಳು ನಡೆದವು. ಫೆ.25ರವರೆಗೆ ಕರಾವಳಿ ಕಲೋತ್ಸವ, ಕೃಷಿ ಮೇಳ, ನಾಟಕೋತ್ಸವಗಳು ನಡೆಯಲಿವೆ.