ಬಂಟ್ವಾಳ: ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ನಂದಾವರ ಕಟ್ಲೆಮಾರ್‌ನಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಪ್ರಸ್ತುತ ಈ ಅಂಗನವಾಡಿ ಕೇಂದ್ರ ಸ್ಥಳವು ಸಾಕಷ್ಟು ಕಿರಿದಾಗಿದ್ದು, ರಸ್ತೆಗೆ ತಾಗಿಕೊಂಡಿದೆ. ಇಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡಲ್ಲಿ ಮುಂದೆ ರಸ್ತೆ ವಿಸ್ತರಣೆಗೆ ತೊಂದರೆಯಾಗಲಿದೆ. ಹೀಗಾಗಿ ಗ್ರಾ.ಪಂ.ನವರು ಶೀಘ್ರದಲ್ಲಿ ಬೇರೆ ಸ್ಥಳ ಗುರುತಿಸಿದರೆ ಅನುಕೂಲವಾಗಲಿದೆ ಎಂದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರವೀಂದ್ರ ಕಂಬಳಿ, ಬಂಟ್ವಾಳ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ನಸೀಮಾ ಬೇಗಂ, ಲೋಕೋಪಯೋಗಿ ಇಲಾಖೆಯ ಎಇಇ ಷಣ್ಮುಗಂ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಹಮ್ಮದ್, ಗುತ್ತಿಗೆದಾರ ಗಿರೀಶ್, ಗ್ರಾ.ಪಂ.ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಭಾರತಿ ಬೇಬಿ ಕುಂದರ್ ವಂದಿಸಿದರು.