ಬಂಟ್ವಾಳ ಪುರಸಭೆ ಜನರಿಗೆ ಕುಡಿಯುವ ನೀರೊದಗಿಸುವ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ 40.75 ಕೋ.ರೂ ವಿಸ್ತೃತ ಕಾಮಗಾರಿಗೆ ಬಂಟ್ವಾಳ ಪುರಸಭೆಯ ವಿಶೇಷ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಒಪ್ಪಿಗೆ ನೀಡಲಾಯಿತು. ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ವಿಷಯ ಮಂಡಿಸಿದರು.
ಹಿರಿಯ ಸದಸ್ಯ ಗೋವಿಂದಪ್ರಭು ಮಾತನಾಡಿ ಯೋಜನೆಗೆ ಸಂಬಂಧಿಸಿ ಶಾಸಕರು ಪತ್ರ ನೀಡಿ,ಪುರಸಭೆಯಿಂದ ಹಣ ಠೇವಣಿ ಇಟ್ಟು ವರ್ಷವಾದರೂ ಕಾಮಗಾರಿ ಆರಂಭಕ್ಕೆ ವಿಳಂಬವಾಗಲು ಕಾರಣ ಏನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಯುಡಬ್ಲು ಎಸ್ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮೀ ಅವರು ಕೋವಿಡ್- 19 ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು ನಿಜ.ಸುಮಾರು 171 ಕಿ.ಮೀ. ಪೈಪ್ ಲೈನ್ ಆಗಬೇಕಾಗಿದ್ದು,ಈಗಾಗಲೇ 95 ಕಿ.ಮೀ.ಪೈಪ್ ಲೈನ್ ಪೂರ್ಣಗೊಳಿಸಲಾಗಿದೆ. ಉಳಿದಂತೆ 76 ಕಿ.ಮೀ.ಪೈಪ್ ಲೈನ್ ಕಾಮಗಾರಿ ಆಗಬೇಕಾಗಿದ್ದು , 7000 ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ.ಮುಂದಿನ ಜನಸಂಖ್ಯೆಯನ್ನಾಧರಿಸಿ ಈ ಯೋಜನೆ ರೂಪಿಸಲಾಗಿದೆ ಎಂದರು.
ಯೋಜನೆ ಕಾರ್ಯಗತಗೊಂಡು ಮೂರುವರ್ಷವಾದರೂ ಪುರವಾಸಿಗಳಿಗೆ ಇನ್ನೂ ನೀರು ಪೂರೈಸಲು ಸಾಧ್ಯವಾಗಿಲ್ಲ,4 ಇದ್ದ ಪಂಪ್ ಹೌಸ್ ಈಗ 8 ಕ್ಕೇರಿದೆ. ಪುರಸಭೆಗೆ ನೀರಿನ ಕರ 3ರಿಂದ 4 ಲಕ್ಷ ಬರುತ್ತಿದೆ. 30 ಲಕ್ಷ ರೂ.ವಿದ್ಯುತ್ ಬಿಲ್ಲು, ಸೋರಿಕೆ, ರಿಪೇರಿ ಎಂದು ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ. ಈಗಾಗಲೇ ಪುರಸಭೆ 5 ಕೋ.ರೂ.ವಿದ್ಯುತ್ ಬಿಲ್ಲು ಬಾಕಿ ಇದೆ. ಎಸ್ ಎಫ್ ಸಿಯಲ್ಲಿ ದೊರಕುವಂತ ಅನುದಾನವನ್ನು ವಿದ್ಯುತ್ ಬಿಲ್ಲಿಗೆ ಮೀಸಲಿಡುವುದಾದರೆ ಅಭಿವೃದ್ದಿ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಕೆಯುಡಬ್ಲುಎಸ್ ಎಇಇ ರವಿ ಮತ್ತು ಇಂಜಿನಿಯರ್ ಶೋಭಾಲಕ್ಷ್ಮೀ ಬಳಿ ಪ್ರಶ್ನಿಸಿದರು. ಸದಸ್ಯರಾದ ವಾಸುಪೂಜಾರಿ, ಗಂಗಾಧರ ಪೂಜಾರಿ, ಮೊನಿಷ್ ಆಲಿ,ವಿದ್ಯಾವತಿ, ಈ ವಿಷಯದ ಕುರಿತು ಚರ್ಚೆಯಲ್ಲಿ ಪಾಲ್ಗೊಂಡರು.
ನಗರ ಯೋಜನಾ ನಿರ್ದೇಶಕರು ಸದಸ್ಯರನ್ನು ಹೊರತುಪಡಿಸಿ ಕೇವಲ ಅಧ್ಯಕ್ಷರ, ಅಧಿಕಾರಿಗಳ ಸಭೆ ನಡೆಸುವುದರ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಈ ಕುರಿತು ಗೋವಿಂದ ಪ್ರಭು ಅಸಮಾಧನ ವ್ಯಕ್ತಪಡಿಸಿದರು.ಇದಕ್ಕೆ ಸದಸ್ಯ ಗಂಗಾಧರ ಪೂಜಾರಿ ಧ್ವನಿಗೂಡಿಸಿದರು. ಪಿ.ಡಿ.ಯವರೇ ಸದಸ್ಯರನ್ನು ಕರೆಯುವುದು ಬೇಡ ಎಂದು ಹೇಳಿರುವುದರಿಂದ ಪುರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿದ್ದು,ಅವರು ಕೆಲ ಸಲಹೆ ನೀಡಿದ್ದಾರೆ ಎಂದು ಅಧ್ಯಕ್ಷ ಶರೀಫ್ ಸಮರ್ಥಿಸಿದರು. ಸುದೀರ್ಘ ಚರ್ಚೆಯ ಬಳಿಕ ಕೊನೆಗೂ 40.75 ಕೋ.ರೂ.ವಿನ ವಿಸ್ತೃತ ಯೋಜನೆಗೆ ಸಭೆ ಅನುಮೋದನೆ ನೀಡಿತು.
5 ಕೋ.ರೂ.ಗೆ ಪ್ರಸ್ತಾವನೆ: ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ 5 ಕೋ.ರೂ.ವಿಶೇಷ ಅನುದಾನ ಕೋರಿ ಡಿ.ಸಿ.,ಶಾಸಕರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಸಮರ್ಪಕವಾಗಿ ಮನೆ,ಮನೆ ಕಸ ಸಂಗ್ರಹವಾಗದೆ ರಸ್ತೆಯಲ್ಲಿ ಕಸ ರಾಶಿ ಎಸೆಯುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಆಯಕಟ್ಟಿನಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕೆಂಬ ಸಲಹೆ ಪುನಾರಾವರ್ತನೆಯಾಯಿತು. ಈ ಬಗ್ಗೆ ತಾನು ಅಧ್ಯಕ್ಷನಾಗಿದ್ದಾಗಲೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸದಸ್ಯ ರಾಮಕೃಷ್ಣ ಆಳ್ವ ಸಭೆಯ ಗಮನಕ್ಕೆ ತಂದರು. ಕಸ ವಿಲೇವಾರಿಗೆ ಸಂಬಂಧಿಸಿ ಮುಂದಿನ ಸಾಮಾನ್ಯಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ವೇದಿಕೆಯಲ್ಲಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಹರಿಪ್ರಸಾದ್ ,ಶಶಿಕಲಾ ,ದೇವಕಿ, ಹಸೈನಾರ್,ಜೀನತ್ ಫಿರೋಜ್, ಅಬುಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಸ್ವಾಗತಿಸಿ,ವಂದಿಸಿದರು