ಬಂಟ್ವಾಳ: ವೃದ್ಧೆಯೊಬ್ಬರು ಅಸಹಜವಾಗಿ ಸಾವನ್ನಪ್ಪಿದ ಪ್ರಕರಣವೊಂದು ಹತ್ಯಾ ಪ್ರಕರಣವಾಗಿ ಬದಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಎಂಬಲ್ಲಿ ನಡೆದಿದೆ.
ಅಮ್ಮುಂಜೆ ಗ್ರಾಮದ ಬೆನೆಡಿಕ್ಟ ಕಾರ್ಲೊ (72) ಸಾವನ್ನಪ್ಪಿದವರು. ಇವರನ್ನು ಹತ್ಯೆ ಮಾಡಿದ ಆರೋಪದಲ್ಲಿ ವೃದ್ಧೆಯನ್ನು ನೋಡಿಕೊಳ್ಳಲು ಬರುತ್ತಿದ್ದ ಅಮ್ಟಾಡಿ ನಿವಾಸಿ ಎಲ್ಮಾ ಪ್ರಶ್ಚಿತಾ ಬರೆಟ್ಟೊ (25), ನರಿಕೊಂಬು ನಿವಾಸಿಗಳಾದ ಸತೀಶ್ ಮತ್ತು ಚರಣ್ ಅವರನ್ನು ಬಂಧಿಸಲಾಗಿದ್ದು, ಅವರಿಂದ 98 ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವೈಲೆಂಟೈನ್ ಡಿʻಸೋಜಾ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ, ನಾಗರಾಜ್ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಟ್ಲ ಠಾಣಾ ಪಿ.ಎಸ್.ಐ ವಿನೋದ್ ರೆಡ್ಡಿ, ಹಾಗೂ ಎಚ್.ಸಿಗಳಾದ ಗಿರೀಶ್, ಸುರೇಶ್, ಜನಾರ್ದನ, ಪ್ರಮೀಳಾ, ಕಿರಣ್, ಪಿ.ಸಿಗಳಾದ ನಝೀರ್, ಪುನೀತ್, ಮನೋಜ್, ಪ್ರಸನ್ನ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಘಟನೆ ವಿವರ: ಜನವರಿ 26ರಂದು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ (72) ಎಂಬ ಮಹಿಳೆಯ ಅಸಹಜ ಸಾವು ಪ್ರಕರಣ ವರದಿಯಾಗುತ್ತದೆ. ಫೆ.2ರಂದು ಮೃತ ಮಹಿಳೆಯ ಪುತ್ರ ಠಾಣೆಗೆ ಆಗಮಿಸಿ, ತಮ್ಮ ತಾಯಿಯ ಸಾವಿನ ಬಗ್ಗೆ ಅನುಮಾನವಿದೆಎಂದು ದೂರು ನೀಡಿದ ಮೇರೆಗೆ ಹಲವರನ್ನು ವಿಚಾರಿಸಲಾಯಿತು. ಈ ಸಂದರ್ಭ ಕೆಲಸದಾಕೆಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಲ್ಮಾ ಪ್ರಶ್ಚಿತ ಬರೆಟ್ಟೋ ,ವೃದ್ಧೆ ಬಳಿ ಇದ್ದ ಬಂಗಾರವನ್ನು ದೋಚಲು ಈ ಸ್ಕೆಚ್ ಹಾಕಿದ್ದಾಳೆ. ಈಕೆ ತನ್ನ ಸ್ನೇಹಿತರಾದ ನರಿಕೊಂಬು ನಿವಾಸಿಯಾದ ಸತೀಶ ಮತ್ತು ಚರಣ್ ರವರೊಂದಿಗೆ ಸೇರಿಕೊಂಡು ಜನವರಿ 25ರಂದು ಕಾರ್ಲೋ ರವರ ಮನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ತಾನು ಕೆಲಸ ಮಾಡಲು ಬರುತ್ತಿದ್ದ ಮನೆಗೇ ಕನ್ನ ಹಾಕಿ, ಮನೆ ಮಾಲೀಕರನ್ನೇ ಹತ್ಯೆ ಮಾಡಿ ವೃದ್ಧೆ ಸಾವನ್ನಪ್ಪಿರುವ ವೇಳೆ ಏನೂ ಗೊತ್ತಿಲ್ಲದಂತೆ ಈಕೆ ಕುಳಿತಿದ್ದಳು. ಇದೀಗ ಪೊಲೀಸ್ ತನಿಖೆ ವೇಳೆ ವಿಷಯ ಬಹಿರಂಗವಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.