ಇಂದಿನ ವಿಶೇಷ

ಜಿಲ್ಲೆಯ ಪ್ರಥಮ ಕಂಬಳ ಇಂದು: ಡಿಸಿಎಂ ಲಕ್ಷ್ಮಣ ಸವದಿ ಸಹಿತ ಗಣ್ಯರ ದಂಡು

ಹೊಕ್ಕಾಡಿಗೋಳಿ ಎಂಬಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಕಂಬಳ ಇಂದು ಆರಂಭ.

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ’ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ ೩೦ರಂದು ಶನಿವಾರ ನಡೆಯಲಿದ್ದು, ಈ ಬಾರಿ ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದ ಒಟ್ಟು ೧೦ ಕಂಬಳ ಕೂಟಗಳ ಪೈಕಿ ಇದು ಪ್ರಥಮ ಕಂಬಳ.
ಇಲ್ಲಿನ ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆಯುವ ಈ ಕಂಬಳ ಕೂಟಕ್ಕೆ ಶನಿವಾರ ಬೆಳಿಗ್ಗೆ ೭ ಗಂಟೆಗೆ ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಚಾಲನೆ ನೀಡುವರು. ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ಮೂಡುಬಿದ್ರೆ ಚೌಟರ ಅರಮನೆ ಕುಲದೀಪ್ ಎಂ., ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಎಪಿಎಂಸಿ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಮಾಜಿ ಸದಸ್ಯ ರತ್ನಕುಮಾರ್ ಚೌಟ, ಉದ್ಯಮಿ ಜಗತ್ಪಾಲ ಶೆಟ್ಟಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಆರಂಭಗೊಳ್ಳಲಿದೆ.
ಗಣ್ಯರ ದಂಡು:
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ಸಂಜೆ ಗಂಟೆ ೬ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ, ಭಟ್ಕಳ ಶಾಸಕ ಸುನಿಲ್ ನಾಯಕ್, ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಶಾಸಕರಾದ ಹರೀಶ ಪೂಂಜ, ಉಮಾನಾಥ ಕೋಟ್ಯಾನ್, ಪ್ರತಾಪಸಿಂಹ ನಾಯಕ್, ಕೆ.ಹರೀಶ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಹೈಕೋರ್ಟಿನ ಎಡಿಷನಲ್ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ಪ್ರಶಾಂತ್ ರೈ ಮತ್ತಿತರ ಹಲವು ಮಂದಿ ಗಣ್ಯರು ಭಾಗವಹಿಸುವರು. ಈ ಬಾರಿ ಜಿಲ್ಲಾ ಕಂಬಳ ಸಮಿತಿ ನಿರ್ಧಾರದಂತೆ ಕೋವಿಡ್ ನಿಯಮಾವಳಿ ಪಾಲನೆಯಲ್ಲಿ ಒಟ್ಟು ೧೫೦ಕ್ಕೂ ಮಿಕ್ಕಿ ಜೋಡಿ ಕೋಣಗಳು ಭಾಗವಹಿಸಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.
ವಿಶೇಷತೆ:
ಬಂಟ್ವಾಳ ತಾಲ್ಲೂಕಿನ ಎಲಿಯನಗೋಡು ಮತ್ತು ಬೆಳ್ತಂಗಡಿ ತಾಲ್ಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಕಂಬಳಕ್ಕೆ ಸ್ಥಳೀಯ ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಮುಜಿಲ್ನಾಯ ದೈವಸ್ಥಾನದೊಂದಿಗೆ ವಿಶೇಷ ’ಧಾರ್ಮಿಕ ನಂಟು’ ಹೊಂದಿದೆ. ಈಗಾಗಲೇ ಎರಡೂ ಗ್ರಾಮಗಳ ಕೃಷಿಕರು ಮತ್ತು ಕಂಬಳಾಸಕ್ತರು ಶ್ರಮದಾನದಿಂದಲೇ ಕರೆ ದುರಸ್ತಿಗೊಳಿಸಿ ಸಜ್ಜುಗೊಳಿಸಿದ್ದಾರೆ.
ಸುಮಾರು ೭೫ ವರ್ಷಕ್ಕೂ ಮಿಕ್ಕಿ ಇತಿಹಾಸ ಹೊಂದಿರುವ ಈ ಸಾಂಪ್ರದಾಯಿಕ ಕಂಬಳಕ್ಕೆ ಅಂದಿನ ಕೃಷಿಕರು ಏತ ನೀರಾವರಿ ಮೂಲಕ ಕಂಬಳ ಕರೆಗೆ ನೀರು ಹಾಯಿಸಿ ಗ್ಯಾಸ್ ಲೈಟ್ ಬೆಳಕಿನಲ್ಲಿ ’ಒಂಟಿ ಕರೆ’ ಕಂಬಳ ನಡೆಸುತ್ತಿದ್ದರು. ವಿಜೇತ ಕೋಣಗಳ ಮಾಲೀಕರಿಗೆ ಬಾಳೆಗೊನೆ, ಸೀಯಾಳ ಮತ್ತಿತರ ಕೃಷಿ ಉತ್ಪನ್ನಗಳನ್ನು ಬಹುಮಾನ ನೀಡುತ್ತಿದ್ದರು ಎನ್ನುತ್ತಾರೆ ಇಲ್ಲಿನ ಹಿರಿಯರು.
ಈ ಹಿಂದೆ ಸ್ಥಳೀಯ ಕೃಷಿಕರಾದ ಪದ್ಮ ಪೂಜಾರಿ, ಸೀತಾರಾಮ ಶೆಟ್ಟಿ, ಜಗತ್ಪಾಲ ಶೆಟ್ಟಿ ಉಮನೊಟ್ಟು, ಸಂಜೀವ ಶೆಟ್ಟಿ ಕಲಾಯಿದಡ್ಡ, ಸಂಜೀವ ಶೆಟ್ಟಿ ಪೊಡುಂಬ ಮತ್ತಿತರರು ಕಂಬಳದ ನೇತೃತ್ವ ವಹಿಸಿ ಮುನ್ನಡೆಸಿದ್ದರು. ಆ ಬಳಿಕ ಸ್ಥಗಿತಗೊಂಡಿದ್ದ ಕಂಬಳಕ್ಕೆ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿವಂಗತ ಕೆ.ಸಂತೋಷ್ ಕುಮಾರ್ ಭಂಡಾರಿ ಹೊಸ ರೂಪ ನೀಡಿದ್ದರು. ಇವರ ಬಳಿಕ ವಕೀಲ ಸುರೇಶ ಶೆಟ್ಟಿ ಕಂಬಳ ಮುನ್ನಡೆಸಿದ್ದು, ಕಳೆದ ೪ ವರ್ಷಗಳಿಂದ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಇವರು ಮುನ್ನಡೆಸುತ್ತಿದ್ದಾರೆ.
ಸ್ಥಳದಾನಿಗಳು:
ಪ್ರತೀ ವರ್ಷ ಇಲ್ಲಿನ ಪ್ರಗತಿಪರ ಕೃಷಿಕರಾದ ರಾಜು ಗುಮ್ಮಣ್ಣ ಶೆಟ್ಟಿ ಸಹೋದರರು, ಸುಧೀರ್ ಶೆಟ್ಟಿ, ಸುಧಾಕರ ಚೌಟ, ಪ್ರವೀಣ ಕುಲಾಲ್ ಸಹೋದರರು ಮತ್ತು ಹರೀಶ ಶೆಟ್ಟಿ ಸಹೋದರು ಕಂಬಳದ ಅವಧಿಯಲ್ಲಿ ತನ್ನ ಗದ್ದೆಯನ್ನು ಸಂತಸದಿಂದಲೇ ಕಂಬಳಕ್ಕೆ ಬಿಟ್ಟು ಕೊಡುತ್ತಾರೆ.
ಯಶಸ್ವಿಗೆ ಪದಾಧಿಕಾರಿಗಳ ಪಣ:
ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರರಾದ ವಕೀಲ ಸುರೇಶ ಶೆಟ್ಟಿ, ಬಾಬು ರಾಜೇಂದ್ರ ಶೆಟ್ಟಿ, ಕಿರಣ್ ಕುಮಾರ್ ಮಂಜಿಲ, ಪ್ರಧಾನ ಕಾರ್ಯದರ್ಶಿ ಸಂದೇಶ ಶೆಟ್ಟಿ ಪೊಡುಂಬ, ಕೋಶಾಧಿಕಾರಿ ಎಚ್.ಹರೀಶ ಹಿಂಗಾಣಿ, ಕಾರ್ಯದರ್ಶಿ ಪುಷ್ಪರಾಜ್ ಜೈನ್ ನಡ್ಯೋಡಿ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸಂಚಾಲಕರಾದ ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ದನ ಬಂಗೇರ ತಿಮರಡ್ಕ, ಪ್ರಭಾಕರ ಎಚ್.ಹುಲಿಮೇರು, ನಿತ್ಯಾನಂದ ಪೂಜಾರಿ ಕೆಂತಲೆ ಸಹಿತ ವಿವಿಧ ಉಪ ಸಮಿತಿ ಪದಾಧಿಕಾರಿಗಳು ಕಂಬಳದ ಯಶಸ್ವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ