ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಮಂಗಳವಾರ ಬಂಟ್ವಾಳ ತಾಲೂಕು ಮಟ್ಟದ ಗಣರಾಜ್ಯೋತ್ಸವ ನಡೆಯಿತು. ತಹಸೀಲ್ದಾರ್ ರಶ್ಮಿ ಎಸ್.ಆರ್. ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಧಿಕಾರಿ ವರ್ಗ ನಿಷ್ಠೆಯಿಂದ ಕಾರ್ಯವೆಸಗಿದಾಗ ಅಭಿವೃದ್ಧಿ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಕೊರೋನಾ ಲಸಿಕೆಯಿಂದ ತೊಡಗಿ ಭಾರತದ ಪ್ರತಿಯೊಂದು ಪ್ರಗತಿಯುತ ಬೆಳವಣಿಗೆಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದರು. ಶಿಕ್ಷಕ ಶಿವಕುಮಾರ್ಗ ಗಣರಾಜ್ಯೋತ್ಸವ ನಿಮಿತ್ತ ಮುಖ್ಯ ಭಾಷಣ ಮಾಡಿ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕೊಟ್ಟ ಸಂವಿಧಾನದ ವಿಚಾರಧಾರೆಗಳನ್ನು ತಿಳಿಸುವಂತಾಗಬೇಕು ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಡಿವೈಎಸ್ಪಿ ವೆಲೈಂಟೈನ್ ಡಿಸೋಜ ಉಪಸ್ಥಿತರಿದ್ದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸಹಕರಿಸಿದರು. ಸಭಾಕಾರ್ಯಕ್ರಮಕ್ಕೆ ಮುನ್ನ ಪೊಲೀಸ್ ಗೃಹರಕ್ಷಕ ದಳದಿಂದ ಆಕರ್ಷಕ ಪಥಸಂಚಲನ ನಡೆಯಿತು. ಎಸ್.ಐ.ಗಳಾದ ಅವಿನಾಶ್ ಮತ್ತು ರಾಜೇಶ್ ನೇತೃತ್ವ ವಹಿಸಿದ್ದರು.