ಬಂಟ್ವಾಳ: ಬಂಟ್ವಾಳ ತಾಲೂಕಾಡಳಿತ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಸೋಮವಾರ ನಡೆಯಿತು. ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಮತದಾನದ ಹಕ್ಕು ದೇಶದ ನಾಗರೀಕರಿಗೆ ಸಿಕ್ಕಿರುದ ದೊಡ್ಡ ಗೌರವ, ಇದನ್ನು ಮನನ ಮಾಡಿಕೊಂಡು ನಿಷ್ಠೆ ಹಾಗೂ ಜವಾಬ್ದಾರಿಯಿಂದ ಚಲಾಯಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತದಾನ, ಪ್ರಜಾಪ್ರಭುತ್ವ ಹಾಗೂ ಮತದಾರರ ಬಗ್ಗೆ ತಿಳಿದುಕೊಂಡ ವಿಚಾರಗಳನ್ನು ಮತ್ತಷ್ಟು ಮಂದಿಗೆ ತಿಳಿಸುವಂತಾಗಬೇಕು ಎಂದರು.ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಮತದಾನ ಹಾಗೂ ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ತಿಳಿಸಿದಾಗ, ಮುಂದಿನ ಹಂತದಲ್ಲಿ ಪ್ರಜ್ಞಾವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಮತದಾನ ಹಕ್ಕು ಕುರಿತಾಗಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದರು.ಮತದಾರರ ದಿನಾಚರಣೆ ಅಂಗವಾಗಿ ದ.ಕ.ಜಿಲ್ಲಾ ಸ್ವೀಪ್ ಸಮಿತಿ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಹೊಸ ಮತದಾರರಿಗೆ ಡಿಜಿಟಲ್ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಶಿಕ್ಷಣ ಇಲಾಖೆಯ ಕ್ಷೇತ್ರ ಸಂಯೋಜಕಿ ಸುಜಾತ ಕುಮಾರಿ ಬಹುಮಾನಿತರ ಪಟ್ಟಿ ವಾಚಿಸಿದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು. ಚುನಾವಣಾ ಶಾಖೆಯ ಉಪತಹಸೀಲ್ದಾರ್ ರಾಜೇಶ್ ನಾಯ್ಕ್. ಕೇಂದ್ರ ಸ್ಥಾನಿಯ ಶಿರಸ್ತೇದಾರ್ ಅಣ್ಣು ನಾಯ್ಕ್, ಚುನಾವಣೆ ಪ್ರಥಮ ದರ್ಜೆ ಸಹಾಯಕರಾದ ರಾಜ್ ಕುಮಾರ್, ಕಾರ್ತೀಕ್ ಸಹಿತ ವಿವಿಧ ವಿಭಾಗಗಳ ಮುಖ್ಯಸ್ಥರು, ಶಾಲೆ ಕಾಲೇಜುಗಳ ಶಿಕ್ಷಕ ವೃಂದ ಈ ಸಂದರ್ಭ ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.