ಬಂಟ್ವಾಳ: ರೈತ, ದಲಿತ, ಕಾರ್ಮಿಕ ಮತ್ತು ಜನವಿರೋಧಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ಬಂಟ್ವಾಳ ತಾಲೂಕು ಮಟ್ಟದ ಒಂದು ದಿನದ ಉಪವಾಸ ಧರಣಿ ಸತ್ಯಾಗ್ರಹ ಜನವರಿ 22ರಂದು ಬಿ.ಸಿ.ರೋಡ್ ಮಿನಿ ವಿಧಾನಸೌಧದ ಮುಂದೆ ಬೆಳಗ್ಗೆ 10:30ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್ ತಿಳಿಸಿದರು. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ ಸಹಿತ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಎರಡು ತಿಂಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ದಕ್ಷಿಣ ಕನ್ನಡ ಜಿಲ್ಲೆ ಪ್ರತೀ ತಾಲೂಕಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು. ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಸಂತ್ರಸ್ತ ಸಮಿತಿಯ ಮುಖಂಡ ರಾಯ್ ಕಾರ್ಲೋ, ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ತುಂಬೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.