ಮಂಗಳೂರು: ಬಸ್ನಲ್ಲಿ ಯುವತಿಯೋರ್ವಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ, ಈ ವೇಳೆ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆಯೂ ನಡೆಯಿತು.
ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲ, ಕೆದಿಮೂಲೆ ನಿವಾಸಿ ಹುಸೈನ್ ಬಂಧಿತ ಆರೋಪಿ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ.14 ರಂದು ಮಧ್ಯಾಹ್ನ ಯುವತಿ ನಗರದ ಅಸೈಗೋಳಿಯಿಂದ ಪಂಪ್ ವೆಲ್ ಕಡೆಗೆ ಪ್ರಯಾಣ ಮಾಡುತ್ತಿರುವಾಗ ಆರೋಪಿ ಕಿರುಕುಳ ನೀಡಿದ್ದ. ಯುವತಿ ತನ್ನಂತೆ ಬೇರೆಯವರಿಗೂ ಆಗಬಾರದೆಂದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಆರೋಪಿಯ ಕೃತ್ಯದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದು ವೈರಲ್ ಮಾಡಿದ್ದಳು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು. ಮಂಗಳೂರು ಉಪ ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ್ ಎ. ಗಾಂವ್ಕರ್ ಅವರ ಮಾರ್ಗದರ್ಶನದಂತೆ, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಅವರ ನಿರ್ದೇಶನದಂತೆ, ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ, ಉಪ ನಿರೀಕ್ಷಕ, ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರು ಹಾಗೂ ಸಿಬ್ಬಂದಿ ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಆಯುಕ್ತರು 10 ಸಾವಿರ ರೂ. ನಗದು ಬಹುಮಾನ ನೀಡಿದರು. ಅಲ್ಲದೆ ಘಟನೆಯನ್ನು ಧೈರ್ಯದಿಂದ ಎದುರಿಸಿ, ಸಾಮಾಜಿಕ ಜಾಲತಾಣದಲ್ಲಿ ಬರೆದು ದೂರು ನೀಡಿರುವ ಯುವತಿಯನ್ನು ಪೊಲೀಸ್ ಆಯುಕ್ತರು ಅಭಿನಂದಿಸಿ, ಸನ್ಮಾನ ಮಾಡಿದರು.