ಬಂಟ್ವಾಳ: ಮಂಚಿಯ ಲಯನ್ಸ್ ಕ್ಲಬ್ ಕೊಳ್ನಾಡು ಮಂಚಿಯಲ್ಲಿ ಬುಧವಾರ ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ ನಡೆಯಿತು. ದ.ಕ.ಜಿಪಂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದ.ಕ.ಹಾಲು ಒಕ್ಕೂಟ ನಿ.ಕುಲಶೇಖರ, ಮಂಚಿ ಹಾಲು ಉತ್ಪಾದಕರ ಸಹಕಾರ ಸಂಘ, ಇರಾ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಲಯನ್ಸ್ ಕ್ಲಬ್ ಕೊಳ್ನಾಡು ಮಂಚಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸುಪಾಸಿನ ಸುಮಾರು 39 ಮಿಶ್ರತಳಿಯ ಹೆಣ್ಣುಕರುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಿದ್ದರು. ಅವರು ಮಾತನಾಡಿ, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಹೈನುಗಾರರಿಗೆ ಇಂದು ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಸದ್ವಿನಿಯೋಗ ಮಾಡಿಕೊಂಡು ಸ್ವಾವಲಂಬಿ ಹೈನುಗಾರರಾಗಬೇಕು, ಕೃಷಿಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಪೂರಕವಾದ ವಾತಾವರಣವನ್ನು ಸರ್ಕಾರ ಒದಗಿಸಿಕೊಡಬೇಕು ಎಂದರು. ಕೆಎಂಎಫ್ ನ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಕರುಗಳ ಸಾಕುವಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿ, ಹಸಿರುಹುಲ್ಲಿಗೆ ಒತ್ತು ನೀಡಿದರೆ ಹೈನುಗಾರಿಕೆಯಲ್ಲಿ ಯಶಸ್ಸು ಗಳಿಸಬಹುದು ಎಂದರು. ಲಯನ್ಸ್ ಕ್ಲಬ್ ಮಂಚಿ ಕೊಳ್ನಾಡು ಸ್ಥಾಪಕಾಧ್ಯಕ್ಷ ಡಾ. ಗೋಪಾಲಾಚಾರ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಮಂಚಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಮುರಳೀಧರ ಆಳ್ವ, ಇರಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಸುಂದರಿ ಎಸ್. ನಾಯಕ್ ಉಪಸ್ಥಿತರಿದ್ದರು. ಬಂಟ್ವಾಳ ಪಶುಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಅವಿನಾಶ್ ಭಟ್ ಸ್ವಾಗತಿಸಿದರು. ಮಂಚಿಯ ಕೇಶವ ರಾವ್ ವಂದಿಸಿದರು. ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಮಿಶ್ರತಳಿ ಹೆಣ್ಣುಕರುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. 3 ತಿಂಗಳ ಒಳಗಿನ ಮಿಶ್ರತಳಿ ಕರುಗಳ ಪೈಕಿ ಸರಸ್ವತಿ, ಶೋಭಾ ಮುರಳೀಧರ್, ಕೃಷ್ಣಪ್ಪ ನಾಯ್ಕ ಮೊದಲ ಮೂರು ಬಹುಮಾನ ಪಡೆದರು. 6 ತಿಂಗಳ ಒಳಗಿನ ಮಿಶ್ರತಳಿ ಕರುಗಳ ಮಾಲೀಕರಾದ ಕಿರಣ್ ಕುಮಾರ್ ಇರಾ, ಎಚ್. ಪೂರ್ಣಿಮಾ, ಚೆನ್ನಪ್ಪ ಪೂಜಾರಿ ಹಾಗೂ 1 ವರ್ಷದ ಒಳಗಿನ ಮಿಶ್ರತಳಿ ಕರುಗಳ ಮಾಲೀಕರಾದ ಮಹಾಲಿಂಗ ನಾಯ್ಕ, ರಮೇಶ್ ನೂಜಿಪ್ಪಾಡಿ ಮತ್ತು ನಿಶ್ಚಲ್ ಶೆಟ್ಟಿ ಇರಾ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಪಡೆದುಕೊಂಡರು.