ಬಂಟ್ವಾಳ: ಅವಧಿ ಮೀರಿದ ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಬ್ರಹ್ಮರಕೂಟ್ಲು ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ರಮನಾಥ ರೈ ಮಾತನಾಡಿ ಈ ಅವೈಜ್ಞಾನಿಕ ಟೋಲ್ ಸಂಗ್ರಹಣೆಯಿಂದಾಗಿ ಪ್ರಜ್ಞಾವಂತ ಜನರಿಗೆ ತೊಂದರೆಯಾಗುತ್ತಿದೆ. ಆಡಳಿತದಲ್ಲಿರುವವರಿಗೆ ರಚನಾತ್ಮಕ ಹಾಗೂ ಅಭಿವೃದ್ದಿ ಕೆಲಸಗಳು ಬೇಕಾಗಿಲ್ಲ, ಭಾವನತ್ಮಕವಾಗಿ ಜನರನ್ನು ಕೆರಳಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅದಾನಿ ಸಂಸ್ಥೆಗೆ ಸೇರಿದ ಯುಪಿಸಿಎಲ್‌ನ ಉಡುಪಿ- ಕೇರಳ ವಿದ್ಯುತ್ ಪ್ರಸರಣ ಮಾರ್ಗ ಜಿಲ್ಲೆಯಲ್ಲಿ ಹಾದು ಹೋಗಲಿದ್ದು ಈ ಬಗ್ಗೆಯೂ ಜನರು ಎಚ್ಚೆತ್ತುಕೊಂಡು ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ. ಈ ಬಗ್ಗೆ ತಕ್ಷಣ ಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದರು.
ಸಮನ್ವಯ ಸಮಿತಿಯ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಮಾತನಾಡಿ ಟೋಲ್ ಸಂಗ್ರಹದ ಅವಧಿ ಈ ಮೊದಲೇ ಪೂರ್ಣಗೊಂಡಿದ್ದರೂ ಕೂಡ ಇಲ್ಲಿ ಕಾನೂನು ಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ. ತುರ್ತು ವಾಹನ ಸಂಚರಿ ವ್ಯವಸ್ಥೆ ಇಲ್ಲ, ಸೂಕ್ತ ಸರ್ವಿಸ್ ರಸ್ತೆಗಳಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿವಿಧ ಸಂಘಟನೆಗಳ ಪ್ರಮುಖರಾದ ಸದಾಶಿವ ಬಂಗೇರ, ಬೇಬಿ ಕುಂದರ್, ಸುರೇಶ್ ಕುಮಾರ್ ಬಂಟ್ವಾಳ್, ಬಿ.ಶೇಖರ್, ಹಾರೂನ್ ರಶೀದ್, ಮಹಮ್ಮದ್ ನಂದಾವರ, ಪ್ರಕಾಶ್ ಶೆಟ್ಟಿ ತುಂಬೆ, ಲೋಲಾಕ್ಷ ಶೆಟ್ಟಿ, ಲೋಕೆಶ್ ಸುವರ್ಣ ಅಲೆತ್ತೂರು, ಶ್ರೀಧರ ಅಮೀನ್, ಮಧುಸೂದನ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಎನ್‌ಎಚ್‌ಎಐ ಯ ಸಹಾಯಕ ತಾಂತ್ರಿಕ ಎಂಜಿನಿಯರ್ ಅನಿರುದ್ದ್ ಅವರಿಗೆ ಮನವಿ ಸಲ್ಲಿಸಲಾಯಿತು.