ಬಂಟ್ವಾಳ: ಬಂಟ್ವಾಳ ತಾಲೂಕಿನ ಲೊರೆಟ್ಟೊದಲ್ಲಿ ಉಡುಪಿ ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣಾ ಮಾರ್ಗದ ಸಂಭಾವ್ಯ ಸಂತ್ರಸ್ತರ ಸಭೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಶ್ರಯದಲ್ಲಿ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಯು.ಪಿ.ಸಿ.ಎಲ್. ಪ್ರಾಯೋಜಿತ ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣಾ ಮಾರ್ಗದ ಸರ್ವೆ ಕಾರ್ಯ ನಡೆಯುತ್ತಿರುವ ಗುಮಾನಿಯಿಂದ ಅತಂಕಿತ ಸಂತ್ರಸ್ತರು ರೈತಸಂಘದ ಅಶ್ರಯದಲ್ಲಿ ನಡೆಸಿದ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ರವಿ ಕಿರಣ್ ಪುಣಚ ಮಾತನಾಡಿ ಇಂಥ ಯೋಜನೆಯಿಂದ ಜಿಲ್ಲೆಯ ಕೃಷಿ, ಅರಣ್ಯ ಸಂಪತ್ತು ಮತ್ತು ಜನಜೀವನದ ಮೇಲೆ ಗದಾಪ್ರಹಾರ ಮಾಡಿದಂತೆ ಆಗುತ್ತದೆ. ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಇಂಥ ಯೋಜನೆ ಅನುಷ್ಠಾನ ಮಾಡಲು ಬಿಡಬಾರದು. ರೈತಸಂಘ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿ ಅತಂಕಿತ ಸಂತ್ರಸ್ತರಿಗೆ ಆತ್ಮವಿಶ್ವಾಸ ತುಂಬಿದರು.ಇದೇ ವೇಳೆ ಹೋರಾಟ ಸಮಿತಿಯನ್ನು ರಚಿಸಲಾಯಿತು. ಕಾನೂನು ಹೋರಾಟ ಮತ್ತು ಜನಪರ ಹೋರಾಟವನ್ನು ನಡೆಸಲು ನಿರ್ಣಯಿಸಲಾಯಿತು. ಮೊದಲ ಹಂತವಾಗಿ ಗ್ರಾಮಸ್ಥರ ಅನುಮತಿಯಿಲ್ಲದೆ ಪಂಜಿಕಲ್ಲು, ಅರಳ,ಬಿ.ಕಸ್ಭಾ ಮತ್ತು ಅಮ್ಟಾಡಿ ಗ್ರಾಮಗಳಲ್ಲಿ ಯು.ಪಿ.ಸಿ.ಎಲ್. ಅನಧಿಕೃತವಾಗಿ ಸರ್ವೆ ನಡೆಸಿ ಹಾಕಿದ ಗಡಿಗುರುತುಗಳನ್ನು ತೆರವುಗೊಳಿಸಿ ಪ್ರಜಾಪ್ರಭುತ್ವಕ್ಕೆ ಮರುಜೀವ ತುಂಬಲು ನಮ್ಮ ಭೂಮಿ – ನಮ್ಮ ಹಕ್ಕು ಅನ್ಯರಿಗೆ ಮಾರಟಕ್ಕಿಲ್ಲ ಕಾರ್ಪೋರೇಟ್ ಕಂಪನಿಗಳಿಗೆ,ವಿದ್ಯುತ್ ಪ್ರಸರಣಾ ಸಂಸ್ಥೆಗಳಿಗೆ ಮತ್ತು ಭೂ ದಲ್ಲಾಳರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂಬ ನಾಮ ಫಲಕವನ್ನು ಜನವರಿ 26 ರ ಗಣರಾಜ್ಯ ದಿನದಂದು ಬೆಳಗ್ಗೆ 8 ಗಂಟೆಗೆ ಸೋರ್ನಾಡಿನಿಂದ ನಾಲ್ಕು ಗ್ರಾಮಗಳ ಮುಖ್ಯ ದ್ವಾರಗಳಲ್ಲಿ ಹಾಕುವ ಚಳವಳಿಗೆ ಚಾಲನೆ ನೀಡಲು ನಿರ್ಣಯಿಸಲಾಯಿತು. ಸಭೆಯಲ್ಲಿ ರೈತಸಂಘ ಲೊರೆಟ್ಟೋ ಘಟಕದ ಪ್ರಧಾನ ಕಾರ್ಯದರ್ಶಿ ವಿವಿಯನ್ ಪಿಂಟೋ,ರೋಯ್ ಕಾರ್ಲೋ, ದೇವಪ್ಪ ನಾಯ್ಕ ಇನ್ನಿತರರು ಭಾಗವಹಿಸಿದ್ದರು