ಲಸಿಕೆ ಸೇಫ್, ಭೀತಿ ಬೇಡ – ಮೊದಲ ಲಸಿಕೆ ಪಡೆದುಕೊಂಡ ಗಣೇಶ್
ಕೊರೊನಾ ಲಸಿಕೆ ಸೇಫ್ ಆಗಿದ್ದು, ಭೀತಿ ಬೇಡ ಎಂದು ಬಂಟ್ವಾಳದಲ್ಲಿ ಮೊದಲ ಲಸಿಕೆ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಗಣೇಶ್ ಸುದ್ದಿಗಾರರಿಗೆ ತಿಳಿಸಿದರು. ಕೊರೊನಾ ತಡೆಗಟ್ಟುವಲ್ಲಿ ಲಸಿಕೆ ಪ್ರಧಾನ ಪಾತ್ರ ವಹಿಸುತ್ತದೆ. ಎಲ್ಲರಿಗೂ ಈ ಲಸಿಕೆ ದೊರೆಯುತ್ತದೆ. ಮೊದಲ ಲಸಿಕೆಯನ್ನು ನಾನು ಪಡೆದುಕೊಂಡಿದ್ದು, ಇದರಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ಇದು ಸುರಕ್ಷಿತವಾಗಿದ್ದು, ಯಾರೂ ಭಯಪಡಬೇಕಾದ್ದಿಲ್ಲ ಎಂದವರು ತಿಳಿಸಿದರು.
ಆರಂಭಿಕ ಹಂತವಾಗಿ ಬಂಟ್ವಾಳ ತಾಲೂಕಿನ 100 ಮಂದಿ ಆರೋಗ್ಯ ಇಲಾಖೆಗೆ ಸಂಬಂಧಿಸಿದವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.
ದ.ಕ.ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಬಂಟ್ವಾಳ ತಾಲೂಕು ಆಸ್ಪತ್ರೆ ಆಶ್ರಯದಲ್ಲಿ ಶನಿವಾರ ಬೆಳಗ್ಗೆ ನಡೆದ ಕೋವಿಡ್ ಚುಚ್ಚುಮದ್ದು ಲಸಿಕಾಕರಣ ಕಾರ್ಯಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಪ್ರಥಮ ಲಸಿಕೆಯನ್ನು ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಗಣೇಶ್ ಜ್ಯೋತಿ ಬೆಳಗಿಸಲು ಸೂಚಿಸಿ, ಕೊರೊನಾ ವಾರಿಯರ್ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ದೊರಕಿಸಿದರು. ಈ ಸಂದರ್ಭ ಮಾತನಾಡಿದ ನಾಯ್ಕ್, ಆತ್ಮನಿರ್ಭರ ಭಾರತ ಸಾಕಾರಗೊಳ್ಳುತ್ತಿದ್ದು, ಭಾರತದಲ್ಲೇ ಸುರಕ್ಷಿತವಾದ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ, ಇದಕ್ಕೆ ವಿದೇಶಗಳಿಂದಲೂ ಬೇಡಿಕೆ ಬರುತ್ತಿದೆ. ಕೋವಿಡ್ ಮುಕ್ತ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ ಎಂದರು. ತಾಲೂಕಿನ 2503 ಮಂದಿಗೆ ಲಸಿಕೆ ವಿತರಿಸಲಾಗುತ್ತಿದ್ದು, 22 ಬೂತ್ ಗಳಲ್ಲಿ ಪ್ರಥಮ ಹಂತದ ಲಸಿಕೆಯನ್ನು ಆರೋಗ್ಯ ಇಲಾಖೆ ಹಾಗೂ ಅದಕ್ಕೆ ಸಂಬಂಧಿಸಿದ ಕೋವಿಡ್ ವಾರಿಯರ್ ಗಳಿಗೆ ನೀಡಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ತಾಲೂಕಿನಲ್ಲಿ ಕೈಗೊಂಡ ಕ್ರಮಗಳ ಕುರಿತು ವಿವರ ನೀಡಿದರು. ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಇಒ ರಾಜಣ್ಣ, ಬಂಟ್ವಾಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಸಿಡಿಪಿಒಗಳಾದ ಸುಧಾ ಜೋಶಿ, ಗಾಯತ್ರಿ ಕಂಬಳಿ, ಬಿಇಒ ಜ್ಞಾನೇಶ್, ಶಿಕ್ಷಣ ಇಲಾಖೆ ಅಧಿಕಾರಿ ಸುಜಾತಾ, ಆಸ್ಪತ್ರೆ ವೈದ್ಯರಾಧ ಡಾ.ಸೌಮ್ಯಾ, ಡಾ.ತುಫೈಲ್, ಡಾ. ಜಯಪ್ರಕಾಶ್, ಡಾ. ಸಂದೀಪ್ ಉಪಸ್ಥಿತರಿದ್ದರು. ಆಸ್ಪತ್ರೆ ಸಿಬ್ಬಂದಿ ಸುರೇಶ್ ಪರ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.