ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಕುಂಬಾರಿಕೆ ಉತ್ಪನ್ನಗಳ ಮಾರಾಟಮಳಿಗೆಯು ಬಿ.ಸಿ.ರೋಡಿನ ಮಿನಿವಿಧಾನಸೌಧದ ಮುಂಭಾಗದಲ್ಲಿರುವ ಸಂಘದ ಸ್ವಂತ ಕಟ್ಟಡದಲ್ಲಿ ಜ.14 ರಿಂದ ಕಾರ್ಯಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ತಿಳಿಸಿದ್ದಾರೆ.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ಮಾರಾಟ ಮಳಿಗೆ ಉದ್ಘಾಟಿಸಲಿದ್ದಾರೆ.ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಸಭಾಧ್ಯಕ್ಷತೆ ವಹಿಸುವರು.ಬಂಟ್ವಾಳ ಪುರಸಭಾ ಸದಸ್ಯ ಹರಿಪ್ರಸಾದ್,ನಿವೃತ್ತ ಬ್ಯಾಂಕ್ ಮೆನೇಜರ್ ಸುಂದರ ಬಿ.,ನಿವೃತ್ತ ಅಭಿಯಂತರರಾದ ಲೋಕನಾಥ್ ಡಿ.ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಗ್ರಾಮೀಣ ಕುಂಬಾರಿಕೆಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುಂಬಾರಿಕೆ ಮಾರಾಟ ಮಳಿಗೆ ತೆರೆಯಲಾಗುತ್ತಿದೆ. ಮೂರನೇ ಶಾಖೆ ಇದಾಗಿದ್ದು, ಗ್ರಾಮೀಣ ಕುಂಬಾರರ ಕುಶಲಕರ್ಮಿಗಳಿಂದ ಗ್ರಾಹಕರಿಗೆ ನೇರವಾಗಿ ಗುಣಮಟ್ಟದ ಕುಂಬಾರಿಕೆ ಉತ್ಪನ್ನಗಳನ್ನು ದೊರೆಯುವಂತೆ ಮಾಡುವ ಉದ್ದೇಶವನ್ನು ಸಹಕಾರ ಸಂಘ ಹೊಂದಿದೆ ಎಂದರು. ದ.ಕ.ಜಿಲ್ಲೆಯಲ್ಲಿ ಎಲ್ಲಾ ಕುಶಲಕರ್ಮಿಗಳು ಉತ್ಪಾದಿಸಿದ ಎಲ್ಲಾ ರೀತಿಯ ಮಣ್ಣಿನ ಪರಿಕರಗಳನ್ನು ಸಹಕಾರ ಸಂಘ ಖರೀದಿಸಿ ಮಾರುಕಟ್ಟೆ ಒದಗಿಸುತ್ತದೆ. ಉತ್ಪನ್ನಗಳಿಗನುಸಾರವಾಗಿ ಅವರಿಗೆ ಪ್ರೋತ್ಸಾಧನವಾಗಿ ಬೋನಸ್ ನೀಡಲಾಗುತ್ತಿದೆ ಎಂದ ಅವರು ಪುತ್ತೂರು ಸಮೀಪದ ಕೌಡಿಚಾರಿನಲ್ಲಿರುವ ಸಂಘದ ಉತ್ಪಾದನಾ ಕೇಂದ್ರವನ್ನು ಅಧುನಿಕವಾಗಿ ಯಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿ ಸರಕಾರದ ಮುಂದೆ ಪ್ರಸ್ತಾಪ ಇಡಲು ಯೋಚಿಸಲಾಗಿದೆ ಎಂದರು.
ಆತ್ಮನಿರ್ಭರ ಭಾರತದ ದೃಷ್ಟಿಯನ್ನಿರಿಸಿಕೊಂಡು ದ.ಕ.ಜಿಲ್ಲೆಯಲ್ಲಿ ಗ್ರಾಮೀಣ ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಖರೀದಿಸಿ,ಮಾರಾಟದ ಏಕೈಕ ಸಹಕಾರಿ ಸಂಘ ಇದಾಗಿದ್ದು, ಕೌಡಿಚಾರು ಕೇಂದ್ರದಲ್ಲಿ ಗ್ರಾಹಕರ ಬೇಡಿಕೆಗನುಗುಣವಾಗಿ ನವೀನ ಮಾದರಿಯ ಕಲಾತ್ಮಕವಾದ ಉತ್ಪನ್ನಗಳ ಸಹಿತ ದಿನಬಳಕೆಯ ಮಣ್ಣಿನ ಪಾತ್ರೆಗಳು, ಮಣ್ಣಿನ ಸುಂದರ ಕಲಾಕೃತಿಗಳು ತಯಾರಿಸಲಾಗುತ್ತಿದೆ ಎಂದರು.
ನಿರಂತರ ಲಾಭ: 1958ರಲ್ಲಿ ಸ್ಥಾಪನೆಯಾದ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘವು ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ. 2019-20 ರ ಸಾಲಿನಲ್ಲು 174.47 ಕೋ.ರೂ.ವ್ಯವಹಾರ ನಡೆಸಿದ್ದು,85.83 ಲ.ರೂ.ಲಾಭಗಳಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ತಿಳಿಸಿದರು. ವಿವಿಧ ಯೋಜನೆಗಳಿಗೆ 33.17 ಕೋ.ರೂ.ಸಾಲ ನೀಡಲಾಗಿದ್ದು,ಕುಂಬಾರಿಕೆ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೇ.4 ಬಡ್ಡಿದರದಲ್ಲಿ ಕುಂಬಾರಿಕೆ ಅಭಿವೃದ್ದಿ ಸಾಲ ನೀಡಲಾಗಿದೆ.ಸಂಘದ ಲೆಕ್ಕ ಪರಿಶೋಧನೆಯಲ್ಲಿಯು’ ಎ’ವರ್ಗ ವನ್ನು ನಿರಂತರವಾಗಿ ಕಾಯ್ದು ಕೊಳ್ಳಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷ ದಾಮೋದರ ವಿ., ನಿರ್ದೇಶಕರುಗಳಾದ ಗಣೇಶ್, ಪ್ರಶಾಂತ್ ಬಂಜನ್ ಮತ್ತು ಸೇಸಪ್ಪ ಕುಲಾಲ್, ಸಂಘದ ಕಾರ್ಯನಿರ್ವಹಣಾಕಾರಿ ಎಸ್. ಜನಾರ್ಧನ ಮೂಲ್ಯ ಉಪಸ್ಥಿತರಿದ್ದರು.