ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಮಧ್ಯಭಾಗವಾಗಿರುವ ಬಂಟ್ವಾಳದಲ್ಲೀಗ ರಾಜಕೀಯ ಚಟುವಟಿಕೆಗಳ ವೇಗ. ಮೊನ್ನೆ ಕಾಂಗ್ರೆಸ್ ಸಮಾವೇಶ ಭರ್ಜರಿಯಾಗಿ ನಡೆದಿದ್ದರೆ, ಇಂದು ಬಿಜೆಪಿ ಸಮಾವೇಶ.
ಸೋಮವಾರ ಮಧ್ಯಾಹ್ನ 3.30ಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವ ಬಂಟರ ಭವನದಲ್ಲಿ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಒಗ್ಗೂಡುವ ಜನಸೇವಕ ಸಮಾವೇಶ ನಡೆಯಲಿದೆ. 3 ಗಂಟೆಗೆ ಸುಮಾರು 3 ಸಾವಿರ ಮಂದಿ ಜನಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮಕ್ಕೆ ರಾಜ್ಯದ ಪ್ರಮುಖರಾದ ಸಚಿವ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಸಹಿತ ಪಕ್ಷದ ಉನ್ನತ ನಾಯಕರು ಭಾಗವಹಿಸಲಿರುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಜಿಲ್ಲೆಯ ಎಲ್ಲ ಶಾಸಕರು ಉಪಸ್ಥಿತರಿರುವರು ಗೆದ್ದವರು ಜನಸೇವಕರಾಗಿ ಕೆಲಸ ಮಾಡಬೇಕು ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಮುನ್ನಡೆಯಬೇಕು ಎಂಬ ನಿಟ್ಟಿನಲ್ಲಿ ಜನಸೇವಕ ಸಮಾವೇಶವನ್ನು ಇಡೀ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 5 ತಂಡಗಳು 37 ಸಂಘಟನಾ ಜಿಲ್ಲೆಗೆ ಪ್ರವಾಸ ಮಾಡಲಿದ್ದಾರೆ. ಜಿಲ್ಲೆಗೆ ಬಂಟ್ವಾಳ ಕೇಂದ್ರಸ್ಥಾನ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಜಿಲ್ಲೆ ಸಮಾವೇಶ ನಡೆಯುತ್ತಿದೆ.