ಬಂಟ್ವಾಳ: ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಇದ್ದರೆ ಪಶುಪಾಲನೆ ಅಭಿವೃದ್ಧಿ ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್ ಹೇಳಿದರು.
ಶುಕ್ರವಾರ ದ.ಕ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆರ್‌ಐಡಿಎಫ್-25 ಯೋಜನೆಯಡಿ ಮಂಜೂರಾದ ಮಂಚಿ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೃಷಿ ಹಾಗೂ ಪಶು ಸಂಗೋಪನೆ ಒಂದಕ್ಕೊಂದು ನೇರವಾದ ಸಂಪರ್ಕವನ್ನು ಹೊಂದಿದ್ದು, ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಅಗತ್ಯವಾಗಿದೆ ಎಂದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಮಾತನಾಡಿ, ಕೃಷಿಕರೇ ಹೆಚ್ಚಿರುವ ಮಂಚಿಯಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಪಶು ಚಿಕಿತ್ಸಾಲಯವಿದ್ದರೂ, ಸೂಕ್ತ ರೀತಿಯ ಕಟ್ಟಡವಿರಲಿಲ್ಲ ಎಂದರು. ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ ಹಾಗೂ ಎಂ.ಎಸ್.ಮಹಮ್ಮದ್ ಶುಭ ಹಾರೈಸಿದರು. ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ದ.ಕ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಸನ್ನಕುಮಾರ್ ಟಿ.ಜಿ., ಬೆಂಗಳೂರು ಎನ್‌ಪಿಸಿಸಿಎಲ್ ಪ್ರಾಜೆಕ್ಟ್ ಎಂಜಿನಿಯರ್ ಬಸನಗೌಡ ಪಾಟೀಲ್, ಸ್ಥಳೀಯರಾದ ಡಾ. ಗೋಪಾಲಕೃಷ್ಣ ಆಚಾರ್, ಗ್ರಾಪಂ ಸದಸ್ಯರು ಉಪಸ್ಥಿತರಿದ್ದು ಶುಭ
ಸ್ಥಳದಾನಿ ಸೂರ್ಯಕಿರಣ್ ಆಚಾರ್ ಮಂಚಿ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಅವಿನಾಶ್ ಭಟ್ ಕೆ. ಸ್ವಾಗತಿಸಿದರು. ಜಾನುವಾರು ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣಮೂರ್ತಿ ವಂದಿಸಿದರು. ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.