ಬಂಟ್ವಾಳ: ಅಟೋರಿಕ್ಷಾದಲ್ಲಿ ಬಂದು ಸುಮಾರು 20 ಸಾವಿರ ರೂ ಮೌಲ್ಯದ 40 ಪಾರಿವಾಳಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ ಮೂವರನ್ನು ದೂರು ನೀಡಿ 24 ಗಂಟೆಯೊಳಗೆ ವಿಟ್ಲ ಪೊಲೀಸರ ತಂಡ ಪತ್ತೆಹಚ್ಚಿದ್ದಾರೆ.
ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ಕರಡಿ ನಾಸಿರ್ (24), ಕಾವಲಕಟ್ಟೆ ಮೂಲದ ಪಾತ್ರತೋಟ ನಿವಾಸಿ ರಿಝ್ವಾನ್ (19), ಬೋಳಂತೂರು ಮೂಲದ ಅಮ್ಟೂರು ನಿವಾಸಿ ಮಹಮ್ಮದ್ ಅಫೀಝ್ (18) ಬಂಧಿತ ಆರೋಪಿಗಳು.
ಒಕ್ಕೆತ್ತೂರು ಮೂಲೆ ಮನೆಯಲ್ಲಿ ಸುಲೈಯಾನೆ ಸುಲೈಮಾನ್ ಪಾರಿವಾಳ ಸಾಕುತ್ತಿರುವುದನ್ನು ಗಮನಿಸಿ ಜನವರಿ 2ರ ತಡ ರಾತ್ರಿ 1 ಗಂಟೆ ಸುಮಾರಿಗೆ ರಿಕ್ಷಾದಲ್ಲಿ ಮೂವರು ಮನೆಯಂಗಳಕ್ಕೆ ಆಗಮಿಸಿ ಪಾರಿವಾಳದ ಗೂಡಿನ ಬೀಗ ಮುರಿದು ಕಳ್ಳತನ ಮಾಡಿ ರಿಕ್ಷಾದಲ್ಲಿ ಪಲಾಯನ ಮಾಡಿದ್ದರು. ಬುಧವಾರ ವಿಟ್ಲ ಠಾಣೆಗೆ ಸುಲೈ ದೂರು ನೀಡಿದ್ದರು. ರಿಕ್ಷಾದಲ್ಲಿ ಪಾರಿವಾಳಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮುಡಿಪ್ಪು ಕಡೆಯಿಂದ ಸಾಲೆತ್ತೂರು ಕಡೆ ಬರುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ಸಾಲೆತ್ತೂರು ಕೊಡಂಗೆಯಲ್ಲಿ ವಿಟ್ಲ ಪೊಲೀಸರು ತನಿಖೆ ನಡೆಸುವ ಸಂದರ್ಭ ಆರೋಪಿಗಳು ಪತ್ತೆಯಾಗಿದ್ದಾರೆ. ರಟ್ಟಿನ ಪೆಟ್ಟಿಗೆಯಲ್ಲಿ ಸುಮಾರು 22 ಪಾರಿವಾಳಗಳು ಲಭಿಸಿದ್ದು, ಕೃತ್ಯಕ್ಕೆ ಬಳಸಿದ ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟೈನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ, ಪ್ರೊಬೆಶನರಿ ಉಪನಿರೀಕ್ಷಕ ಕೃಷ್ಣಕಾಂತ್, ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಪ್ರತ್ತಾಪ, ವಿನಾಯಕ, ಹೇಮರಾಜ್ ಅವರ ತಂಡ ತ್ವರಿತ ಕಾರ್ಯಚರಣೆ ನಡೆಸಿದೆ.