ಬಂಟ್ವಾಳ: ಕಳೆದ 9 ತಿಂಗಳ ಬಳಿಕ ಮಂಕಾಗಿದ್ದ ಕಲಾವಿದರ ಬದುಕಿನಲ್ಲಿ ನಿಧಾನವಾಗಿ ಹೊಸ ಬೆಳಕು ಮೂಡುತ್ತಿರುವ ಈ ಕಾಲಘಟ್ಟದಲ್ಲಿ ಉತ್ತಮ ಗುಣಮಟ್ಟದ ಹೆಚ್ಚು ಚಿತ್ರಗಳು ತಯಾರಾಗಬೇಕಾಗಿದ್ದು,ಈ ದೆಸೆಯಲ್ಲಿ ವಿದ್ಯಾವಂತ ಯುವ ಲೇಖಕರ,ನಿರ್ದೇಶಕರ ಅಗತ್ಯವಿದೆ ಎಂದು ತುಳು ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದ್ದಾರೆ. ಪುಂಜಾಲಕಟ್ಟೆಯ ಮಂತ್ರದೇವತೆ ಕ್ರಿಯೇಷನ್ಸ್ ಅವರ ಚಂದ್ರನ್ ಕಿರು ಚಿತ್ರದ ಪ್ರಥಮ ಪೋಸ್ಟರ್ ನ್ನು ಶನಿವಾರ ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಭ ಕ್ಷೇತ್ರದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು. ಇಂದು ಹೊಸ ಸಿನಿಮಾಗಳು, ಕಿರುಚಿತ್ರಗಳು ನಿರ್ಮಾಣವಾಗುತ್ತಿವೆ. ಆದರೆ ಒಂದೇ ರೀತಿಯ ಕತೆಗಳು ಕಂಡುಬರುತ್ತಿವೆ ಎಂದವರು ವಿಷಾದಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಮಾತನಾಡಿ, ಯುವಜನತೆ ಮಾಡುವಂತ ಸಮಾಜಮುಖಿ, ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ಕೆ ಹಿರಿಯರು,ನಾಗರಿಕರು ಪ್ರೋತ್ಸಾಹ ನೀಡಬೇಕು ಎಂದರು. ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನದಾಸ್ ಕೊಟ್ಟಾರಿ , ಹಿರಿಯ ಕಲಾವಿದರಾದ ಡಿ.ಎಸ್.ಬೋಳಾರ್, ಸ್ವರಾಜ್ ಶೆಟ್ಟಿ, ರಾಜೇಶ್ ಕಣ್ಣೂರು, ಚಿದಾನಂದ ಅದ್ಯಪಾಡಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉದ್ಯಮಿ ಹರೀಂದ್ರ ಪೈ ಶುಭ ಹಾರೈಸಿದರು. ಪ್ರಮುಖರಾದ ನಮ್ಮ ಬಂಟ್ವಾಳ ಸಮೂಹ ಸಂಸ್ಥೆಗಳ ಮುಖ್ಯಸ್ಥ ಪ್ರಶಾಂತ್ ಪುಂಜಾಲಕಟ್ಟೆ, ಕಲಾವಿದ ಚೇತನ್ ರೈ ಮಾಣಿ, ಜೇಸಿ ರಾಜೇಶ್ ಪುಳಿಮಜಲು, ಚಿತ್ರದ ಸಹನಿರ್ದೇಶಕರಾದ ಜಯರಾಜ್ ಅತ್ತಾಜೆ, ಸಚ್ಚಿನ್ ಅತ್ತಾಜೆ, ಕುಶಾಲ್ ಗೌಡ ಹೊಸಮನೆ,ಸಂತೋಷ್ ಮೂರ್ಜೆ ,ರಚನ್ ಅಲಾಡಿ, ಬಾತ್ ಕುಲಾಲ್ , ಚೇತನ್ ಹಾಗೂ ಕಲಾವಿದರು ಉಪಸ್ಥಿತರಿದ್ದರು. ಚಿತ್ರದ ನಿರ್ದೇಶಕ ರಕ್ಷಿತ್ ರೈ ಪ್ರಸ್ತಾವನೆಗೈದರು. ಕಲಾವಿದ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.