ಬಂಟ್ವಾಳ: ಗ್ರಾಪಂ ಚುನಾವಣೆ ಮತ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಡಿ.30ರಂದು ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಮತ ಎಣಿಕೆ ಸಂದರ್ಭ ಎಣಿಕೆ ಕೇಂದ್ರದಲ್ಲಿ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಭ್ಯರ್ಥಿಗಳಿಗೆ ಹಾಗೂ ಏಜಂಟರಿಗೆ ಬಂಟ್ವಾಳ ತಹಸೀಲ್ದಾರ್ ಅನಿತಾಲಕ್ಷ್ಮೀ ಸೂಚಿಸಿದ್ದಾರೆ. ಮತ ಎಣಿಕೆ ಕೊಠಡಿಯೊಳಗೆ ಅಭ್ಯರ್ಥಿ ಅಥವಾ ಒಬ್ಬ ಏಜೆಂಟರಿಗೆ ಮಾತ್ರ ಅವಕಾಶ . ಚುನಾವಣಾಧಿಕಾರಿ ಸಹಿ ಉಳ್ಳ ಭಾವಚಿತ್ರದ ಸಮೇತ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು. ಅವಶ್ಯವಿದ್ದಲ್ಲಿ ಸಂಬಂಧಪಟ್ಟವರಿಗೆ ತೋರಿಸತಕ್ಕದ್ದು ಮೊಬೈಲ್ ಫೋನ್ ಹಾಗೂ ತತ್ಸಮಾನ ಸ್ಮಾರ್ಟ್ ವಾಚ್, ಯಾವುದೇ ಮಾರಕ ಆಯುಧಗಳನ್ನು ಮತ ಎಣಿಕೆ ಕೇಂದ್ರದ ಒಳಗೆ ತರಲು ನಿಷೇಧಿಸಲಾಗಿದೆ. ಒಮ್ಮೆ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಿದ ನಂತರ ಹೊರಗೆ ಹೋದರೆ ಮರು ಪ್ರವೇಶಕ್ಕೆ ಅವಕಾಶವಿಲ್ಲ. ಎಣಿಕೆ ಕೇಂದ್ರದಲ್ಲಿ ಕೊಠಡಿಯ ಒಳಗೆ ಆ ಕ್ಷೇತ್ರದ ಅಭ್ಯರ್ಥಿಯ ಅಥವಾ ಏಜೆಂಟ್ ಮಾತ್ರ ಪ್ರವೇಶಿಸಬೇಕು. ಎಣಿಕೆ ನಂತರ ಎಲ್ಲರೂ ಎಣಿಕೆ ಕೊಠಡಿಯಿಂದ ಹೊರಗೆ ಬರಬೇಕು ಮತ್ತು ವಿಜೇತ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಎಣಿಕೆ ಕೇಂದ್ರವನ್ನು ಕೂಡಲೇ ತೊರೆಯತಕ್ಕದ್ದು. ವಿಜೇತ ಅಭ್ಯರ್ಥಿಗಳಿಗೆ ಪಂಚಾಯತುವಾರು ಚುನಾವಣಾಧಿಕಾರಿಗಳು ಪ್ರಮಾಣ ಪತ್ರವನ್ನು ನೀಡುತ್ತಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಚುನಾವಣಾ ಎಣಿಕೆ ಕೇಂದ್ರದ ಒಳಗೆ ಮತ್ತು 500 ಮೀಟರ್ ಅಂತರದಲ್ಲಿ ಯಾವುದೇ ವಿಜಯೋತ್ಸವ ಹಾಗೂ ಸಂಭ್ರಮಾಚರಣೆಗೆ ನಿಷೇಧಿಸಲಾಗಿದೆ. ಸರಕಾರದ ಮಾರ್ಗಸೂಚಿಯನ್ವಯ ಕೋವಿಡ್ ನಿಯಮಾವಳಿಯನ್ನು ಕಡ್ಡಾಯ ಪಾಲಿಸಬೇಕು. ನಿಯಮವನ್ನು ಪಾಲಿಸದಿದ್ದಲ್ಲಿ ಅಂತಹ ವ್ಯಕ್ತಿಯ ಮೇಲೆ ಮೊಕದ್ದಮೆ ದಾಖಲಿಸಲಾಗುವುದು, ಹಾಗೂ ಎಣಿಕೆ ಕೇಂದ್ರದಿಂದ ಹೊರಕ್ಕೆ ಹಾಕಲಾಗುವುದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಅವರು ವಿಧಿಸಿದ್ದಾರೆ.