ಬಂಟ್ವಾಳ: ಸವಾಲುಗಳನ್ನು ಎದುರಿಸಿ ಕಣಕ್ಕಿಳಿದ ಕಾಂಗ್ರೆಸ್ ಬೆಂಬಲಿತರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭ್ಯರ್ಥಿಯಾಗಿ ಅವಕಾಶ ದೊರಕುವುದುದೇ ದೊಡ್ಡ ಋಣ. ಪಂಚಾಯಿತಿ ಸದಸ್ಯನಾದೊಡನೆ ಕಾಂಗ್ರೆಸ್ ಋಣ ಅವರಿಗೆ ಇರುತ್ತದೆ. ಕಾಂಗ್ರೆಸ್ ಋಣದಿಂದ ಮುಕ್ತನಾಗಲು ಜನ್ಮಜನ್ಮಾಂತರಕ್ಕೂ ಅಸಾಧ್ಯ. ಕಾಂಗ್ರೆಸ್ ನನ್ನ ಧರ್ಮ ಎಂದು ಪಕ್ಷ ತ್ಯಜಿಸುವವರಿಗೆ ತಿರುಗೇಟು ನೀಡಿದರು.ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯವಂಚಿತರಿಗೆ ಓಟಿಗೆ ನಿಲ್ಲಲೂ ಆಗದೆ ಸಮಸ್ಯೆಗಳು ಉಂಟಾಗಿದ್ದವು. ಆದರೆ ಯಾರ ದಬ್ಬಾಳಿಕೆಗೆ ಜಗ್ಗದೆ ನೀವು ಸ್ಪರ್ಧಿಸಿದ್ದಕ್ಕೆ ಅಭಿನಂದನೆ ಎಂದು ರೈ ಹೇಳಿದರು.
ಪಶ್ಚಿಮವಾಹಿನಿ ಯೋಜನೆ ಆಗಬೇಕು ಎಂದು ಒತ್ತಾಯಿಸಿ ನಿಯೋಗ ಕೊಂಡೊಯ್ದದ್ದನ್ನು ನೆನಪಿಸಿದ ರೈ, ಪ್ರಚಾರಕ್ಕಾಗಿ ಯೋಜನೆ ವಿರೋಧಿಸಿ ಪಾದಯಾತ್ರೆ ನಡೆಸಿದವರು ಇಂದು ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿ ಕೋಲಾರಕ್ಕೆ ನೀರು ಹರಿಸುವುದು ತಮ್ಮ ಸಾಧನೆ ಎಂದು ಹೇಳಿರುವುದಾಗಿ ಆರೋಪಿಸಿದರು. ಪ್ರತಿ ಗ್ರಾಪಂಗಳಿಗೆ 20 ಮನೆಗಳನ್ನು ಕೊಡುತ್ತೇವೆ ಎಂಬುದು ಕೇವಲ ಕಡತಗಳಲ್ಲಿ ಉಳಿದಿವೆ ಎಂದು ರೈ ಆರೋಪಿಸಿದರು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಪಕ್ಷಕ್ಕೆ ನಾಯಕರು ಇವತ್ತು ಬರುತ್ತಾರೆ, ನಾಳೆ ಹೋಗಬಹುದು ಆದರೆ ಕಾರ್ಯಕರ್ತರು ಪಕ್ಷದ ಆಸ್ತಿ ಎಂದರು.
ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಿಎಲ್.ಡಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಸುದರ್ಶನ ಜೈನ್, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಪ್ರಮುಖರಾದ ಅಮ್ಮು ರೈ, ಜಿನರಾಜ ಆರಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್ ಅಭ್ಯರ್ಥಿಗಳ ಹೆಸರು ವಾಚಿಸಿದರು. ಜಗದೀಶ ಕೊಯ್ಲ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದವರ ಹೆಸರು ಹೇಳಿ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದವರನ್ನು ಸ್ವಾಗತಿಸಲಾಯಿತು.