ಬಂಟ್ವಾಳ: ಬಂಟ್ವಾಳ ತಾಲೂಕಿನ ಇಗರ್ಜಿಗಳಲ್ಲಿ ಶುಕ್ರವಾರ ನಡೆದ ಕ್ರಿಸ್ಮಸ್ ಆಚರಣೆಯನ್ನು ಕೋವಿಡ್ 19 ಹಿನ್ನೆಯಲ್ಲಿ, ಮಂಗಳೂರು ಧರ್ಮಪ್ರಾಂತ್ಯ ದ ಬಿಷಪ್ ಆದೇಶದ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.ನೂರಾರು ಭಕ್ತರು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪುಜೆಯೊಂದಿಗೆ ಆಚರಿಸಿದರು.
ಬಂಟ್ವಾಳದ ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ, ವಂ.ರೊಯ್ಸಟನ್ ಡಿಸೋಜಾ ಬಲಿಪೂಜೆ ನೆರವೇರಿಸಿದರು. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಉದ್ದೇಶದಿಂದ ಆಸನದ ವ್ಯವಸ್ಥೆ ಮಾಡಲಾಗಿತ್ತು. ಚರ್ಚ್ ಅವರಣದಲ್ಲಿ ದೊಡ್ಡ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಸಂಭ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು.ಇದೇ ಸಂದರ್ಭ ಕ್ರಿಸ್ಮಸ್ ಸಂದೇಶವನ್ನು ಧರ್ಮಗುರು ವಂ.ಫ್ರಾನ್ಸಿಸ್ ಕ್ರಾಸ್ತಾ ನೀಡಿದರು. ಚರ್ಚ್ ನ ಮುಖ್ಯ ರಸ್ತೆಯನ್ನು ಲೋರೆಟ್ಟೊ ಫ್ರೆಂಡ್ಸ್ (ರಿ) ಪ್ರಾಯೋಜಕತ್ವದಿಂದ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ಸದಸ್ಯರು ಹರಾಜು ಪ್ರಕ್ರಿಯೆಯನ್ನು ಬಡವರಿಗೋಸ್ಕರ ನಡೆಸಿದರು. ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು. ಚರ್ಚ್ ಪಾಲನಾ ಮಂಡಳಿಯು ಸಂಭ್ರಮವನ್ನು ಶಿಸ್ತುಬದ್ಧವಾಗಿ ಆಯೋಜಿಲಾಗಿತ್ತು.
ಮಾನವೀಯತೆ, ಮನುಷ್ಯ ಗೌರವ, ಮನುಷ್ಯತ್ವದ ಗುಣಗಳನ್ನು ಮಾನವ ಕುಲಕ್ಕೆ ತುಂಬಲು ಯೇಸುಕ್ರಿಸ್ತರು ಧರೆಗಿಳಿದು ಬಂದು ರೋಗಿಗಳಿಗೆ, ವ್ಯಾಧಿ ಇರುವವರಿಗೆ, ಪಾಪಿಗಳಿಗೆ ಕಷ್ಟದಲ್ಲಿರುವವರಿಗೆ, ತಮ್ಮ ಪ್ರೀತಿಯನ್ನು, ಸಾಂತ್ವನವನ್ನು ನೀಡಿ ಮಾನವೀಯತೆಯನ್ನು ಧಾರೆಯೆರೆದರು. ಅವರ ಜನ್ಮದಿನದಂದು ನಾವು ಅವರ ಮನುಷ್ಯತ್ವದ, ಮಾನವೀಯತೆಯ ಪ್ರತೀಕ ರಾಗಬೇಕೆಂದು ಹೇಳಿದರು. ನಾವು ಈ ಕೋವಿಡ್ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ವಿಶೇಷವಾಗಿ ಬಡ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಅವರ ದುಃಖ, ದುಮ್ಮಾನಗಳನ್ನು ಹಂಚಿಕೊಳ್ಳಲು ಮುಂದಾಗಬೇಕೆಂದು ಕರೆಯಿತ್ತರು. ಇದರ ಪ್ರಯುಕ್ತ ಚರ್ಚಿನಲ್ಲಿ ಬಲಿ ಪೂಜೆಯ ಬಳಿಕ ಸುಮಾರು 70 ಸಾವಿರದವರೆಗೆ ಹಣವನ್ನು ಓಟ್ಟುಗೂಡಿಸಿ ಬಡರೋಗಿಗಳ ದಾನಕ್ಕಾಗಿ ವಿನಿಯೋಗಿಸಲು ಮುಂದಾಗಿದ್ದೇವೆ ಎಂದು ಧರ್ಮಗುರುಗಳು ಸಂದೇಶ ನೀಡಿದರು.