ಬಂಟ್ವಾಳ: ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ್ದು ಯಾಕೆ ಎಂದು ಕಾಂಗ್ರೆಸ್ ತೊರೆದು ಬಿಜೆಪಿಗೆ ಕೆಲ ದಿನಗಳ ಹಿಂದೆಯಷ್ಟೇ ನಳಿನ್ ಸಮ್ಮುಖ ಸೇರ್ಪಡೆಯಾಗಿದ್ದ ತಾಪಂ ಮಾಜಿ ಸದಸ್ಯ, ಪಕ್ಷದ ನಾಯಕರಾಗಿದ್ದ ಮಾಧವ ಮಾವೆ ಗುರುವಾರ ಬಿಜೆಪಿ ಬಂಟ್ವಾಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಸುದೀರ್ಘ ವಿವರಣೆ ನೀಡಿದರು.
ತನಗೆ ಮತ್ತು ತನ್ನ ಪತ್ನಿಗೆ ಕಾಂಗ್ರೆಸ್ ನಲ್ಲಿ ಸಾಕಷ್ಟು ಅಧಿಕಾರಗಳನ್ನು ನೀಡಲಾಗಿದ್ದು, ವರ್ಷಗಟ್ಟಲೆ ಕಾಂಗ್ರೆಸ್ ನಲ್ಲಿರುವವರಿಗಿಂತ ಜಾಸ್ತಿ ಅವಕಾಶಗಳನ್ನು ನೀಡಲಾಗಿದ್ದರೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದಾರೆ ಎಂದು ಕಾಂಗ್ರೆಸ್ ನಲ್ಲಿ ನಾಯಕರು ತನ್ನನ್ನು ಟೀಕಿಸುತ್ತಾರೆ. ನಾನು ಕಾಂಗ್ರೆಸ್ ತ್ಯಜಿಸಿದ್ದು, ಅಧಿಕಾರದ ಆಸೆಗೋಸ್ಕರ ಅಲ್ಲ, ಆತ್ಮಗೌರವಕ್ಕೆ ತನಗೆ ಚ್ಯುತಿ ಬಂತು. ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಬಯಸಿ ನಾನು ಸೇರ್ಪಡೆ ಆಗಿಲ್ಲ, ಕಾಂಗ್ರೆಸ್ ನಲ್ಲಿ ನನ್ನ ಆತ್ಮಗೌರವಕ್ಕೆ ಧಕ್ಕೆ ತರುವ ಕೆಲಸವಾಯಿತು, ನನ್ನನ್ನು ಕಡೆಗಣಿಸಿದಾಗ ವಿಧಿ ಇಲ್ಲದೆ ಪಕ್ಷ ತ್ಯಜಿಸಿ ಹೊರಬರಬೇಕಾಯಿತು ಎಂದು ಮಾವೆ ಹೇಳಿದರು. ಕಾಂಗ್ರೆಸ್ ನಲ್ಲಿ ನಾನು ವಲಸಿಗನಲ್ಲ, ಪಕ್ಷ ದ್ರೋಹದ ಕೆಲಸ ಮಾಡಿರಲಿಲ್ಲ, ಸಮಾಜ ಸೇವೆ ಮಾಡಲೆಂದು ಬಂದಿದ್ದೇನೆ, ವೈಯುಕ್ತಿಕ ಗೌರವಕ್ಕೆ ಧಕ್ಕೆ ಬಂದಾಗ ಮನೆ ಮಕ್ಕಳು ಹೊರ ಬಂದ ಹಾಗೆ, ನಾನು ಕಾಂಗ್ರೇಸ್ ಪಕ್ಷದ ಮನೆಯಿಂದ ಹೊರಬಂದಿದ್ದೇನೆ. ಶಾಸಕ ರಾಜೇಶ್ ನಾಯ್ಕ್ ರವರ ರಾಜ ಧರ್ಮ ದ ಆಡಳಿತಕ್ಕೆ ಬೆಂಬಲ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು. ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ಅವರನ್ನು 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಹಗಲು ರಾತ್ರಿ ದುಡಿಯುತ್ತೇನೆ ಎಂದು ಹೇಳಿದರು. ಇದೇ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಹಿರಿಯ ಕಾಂಗ್ರೆಸಿಗ ಬಾಲಕೃಷ್ಣ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ , ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಡೊಂಬಯ್ಯ ಅರಳ, ಕೇಶವ ದೈಪಲ, ರೊನಾಲ್ಡ್ ಡಿಸೋಜ, ವಸಂತ ಅಣ್ಣಳಿಕೆ, ಸುದರ್ಶನ್ ಬಜ, ಡಿ.ಕೆ.ಹಂಝ ಮೊದಲಾದವರು ಉಪಸ್ಥಿತರಿದ್ದರು.