ಬಂಟ್ವಾಳ

ಡಾ. ಎಂ.ಪ್ರಭಾಕರ ಜೋಶಿ ಅವರಿಗೆ 25ರಂದು ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ಪ್ರದಾನ

ಡಾ. ಎಂ.ಪ್ರಭಾಕರ ಜೋಶಿ

ಬಂಟ್ವಾಳ: ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ, ಬಂಟ್ವಾಳ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ವತಿಯಿಂದ ಡಿ.25ರಂದು ಮಧ್ಯಾಹ್ನ 3 ಗಂಟೆಯ ಬಳಿಕ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ಅರ್ಥಧಾರಿ ಮತ್ತು ಸಂಶೋಧಕ ಡಾ. ಎಂ.ಪ್ರಭಾಕರ ಜೋಶಿ ಅವರಿಗೆ ನೀಡಿ ಗೌರವಿಸಲಾಗುವುದು. ಇದೇ ವೇಳೆ ನೀರ್ಪಾಜೆ ಭೀಮ ಭಟ್ಟ ಸಂಸ್ಮರಣೆ ನಡೆಯಲಿದ್ದು, ಬಳಿಕ ಎಂ.ಗೋಪಾಲಕೃಷ್ಣ ಭಟ್ಟರ ಕೃತಿ ಸ್ವಗತ ಮತ್ತು ಇತರ ಬರಹಗಳು ಹಾಗೂ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ಪಶ್ಚಾತ್ತಾಪದ ಹವಿಗನ್ನಡ ರೂಪಾಂತರ ಕೃತಿಗಳು ಹಾಗೂ ರೇಶ್ಮಾ ಭಟ್ ಅವರ ಕಥಾಸಂಕಲನ ಕಥಾ ವ್ಯವಕಲನ ಬಿಡುಗಡೆಗೊಳ್ಳಲಿವೆ ಎಂದು ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ ಜೈನ್, ಕೋಶಾಧಿಕಾರಿ ಎಸ್.ಗಂಗಾಧರ ಭಟ್, ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸುಬ್ರಾಯ ಭಟ್ ನೆಕ್ಕರೆಕಳೆಯ ನೀರ್ಪಾಜೆ ಸಂಸ್ಮರಣೆ ಮಾಡಲಿರುವರು. ಡಾ. ಜೋಶಿಯವರನ್ನು ಹಿರಿಯ ಅರ್ಥಧಾರಿ ಜಬ್ಬಾರ್ ಸಮೋ ಅಭಿನಂದಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ದೀಪಪ್ರಜ್ವಲನಗೈದು ಕಾರ್ಯಕ್ರಮ  ಉದ್ಘಾಟಿಸಲಿದ್ದು,  ಅಧ್ಯಕ್ಷತೆಯನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಹಿಸುವರು. ಹಿರಿಯ ಅರ್ಥಧಾರಿ ಉಜಿರೆ ಅಶೋಕ ಭಟ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಅಜಕ್ಕಳ ಗಿರೀಶ ಭಟ್ಟ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಗೌರವ ಅತಿಥಿಗಳಾಗಿ ಭಾಗವಹಿಸುವರು ಎಂದವರು ತಿಳಿಸಿದ್ದಾರೆ.

ಡಾ. ಪ್ರಭಾಕರ ಜೋಷಿಯವರು ಯಕ್ಷಗಾನದ ಸಂಶೋಧಕ, ವಿಮರ್ಶಕ, ಅರ್ಥಧಾರಿ. ಯಕ್ಷಗಾನದ ಬಗ್ಗೆ ಇದು ಹೀಗೇ ಎಂದು ನಿರ್ಧಾರಾತ್ಮಕವಾಗಿ ಹೇಳಬಲ್ಲವರು. ಅವರು ಯಕ್ಷಗಾನದ ಕುರಿತು ಹದಿನೈದಕ್ಕೂ ಹೆಚ್ಚು ಸ್ವತಂತ್ರ ಕೃತಿಗಳನ್ನು, ಹಲವಾರು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಹಿರಿಯ ತಲೆಮಾರಿನ ಸಮರ್ಥ ಅರ್ಥಧಾರಿಯಾಗಿರುವ ಜೋಷಿಯವರು ಸಂಘಟಕರಾಗಿ, ಸಂಪನ್ಮೂಲವ್ಯಕ್ತಿಯಾಗಿ, ಮಾರ್ಗದರ್ಶಕರಾಗಿರುವ ವಿದ್ವಾಂಸರು. ಮೂರು ದಶಕಗಳ ಕಾಲ ಅದ್ಯಾಪನ ನಡೆಸಿ ಪ್ರಸಿದ್ಧ ಪ್ರಾದ್ಯಾಪಕರೆನಿಸಿ ಕೊಂಡಿರುವ ಜೋಷಿ ಅವರು ಭಾರತೀಯ ತತ್ವಶಾಸ್ತ್ರ ವಿಚಾರ ತಜ್ಞರು  ಜೊತೆಗೆ ವಾಗ್ಮಿಗಳೂ ಆಗಿದ್ದಾರೆ. ಸರಕಾರದ ಪ್ರತಿಷ್ಟಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಪಡೆದಿರುವ ಜೋಷಿಯವರಿಗೆ ಈ ಬಾರಿಯ ಕನ್ನಡದ ಕಲ್ಹಣ ಪ್ರಶಸ್ತಿ ದೊರೆತಿದೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.