ಕನ್ನಡದ ಕಲ್ಹಣ ದಿ. ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿ.25ರಂದು ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಧ್ಯಾಹ್ನ 3ರ ಬಳಿಕ ನಡೆಯಲಿದ್ದು, ಡಾ. ಎಂ. ಪ್ರಭಾಕರ ಜೋಷಿಯವರಿಗೆ ಪ್ರದಾನ ಮಾಡಲಾಗುವುದು. ದಿ. ನೀರ್ಪಾಜೆ ಭೀಮ ಭಟ್ಟರ ಕುರಿತು ಮಂಗಳೂರು ರಥಬೀದಿಯಲ್ಲಿರುವ ಡಾ. ದಯಾನಂದ ಪೈ, ಡಾ. ಸತೀಶ್ ಪೈ ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ನಾಗವೇಣಿ ಮಂಚಿ ಬರೆದ ಲೇಖನ ಇಲ್ಲಿದೆ
ಲೇಖಕರು: ಡಾ. ನಾಗವೇಣಿ ಮಂಚಿ
(ಸಹಪ್ರಾಧ್ಯಾಪಕರು, ಡಾ. ದಯಾನಂದ ಪೈ, ಡಾ. ಸತೀಶ್ ಪೈ ಸರಕಾರಿ ಕಾಲೇಜು, ಕಾರ್ ಸ್ಟ್ರೀಟ್, ಮಂಗಳೂರು-1)
ಸಾಹಿತ್ಯ, ಸಂಸ್ಕೃತಿ, ರಾಜಕೀಯ ಹೀಗೆ ಎಲ್ಲರದರಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲ ಮಿತಿಗಳನ್ನು ಮೀರಿ ನಿಜವಾದ ಜೀವನಪ್ರೀತಿಯನ್ನು ತೋರಿದ, ಕನ್ನಡಕ್ಕೆ ರಾಜತರಂಗಿಣಿಯನ್ನು ಅನುವಾದಿಸಿ ಜೀವನದಲ್ಲಿ ಪ್ರಜಾರಾಜನಾಗಿ ಉಳಿದವರು ನೀರ್ಪಾಜೆ ಭೀಮಭಟ್ಟರು. ಶ್ವೇತವಸ್ತ್ರದ ಶುಭ್ರಮನಸಿನ ನೀರ್ಪಾಜೆಯವರು ಸಂಸ್ಕೃತದ ಶಿರೋಮಣಿಯಾಗಿದ್ದು ಕನ್ನಡದಲ್ಲಿ ಭೀಮಣ್ಣ ಎಂಬ ಅಕ್ಕರೆಯ ಕರೆಗೆ ಸಂತಸ ಪಟ್ಟ ಸರಳ ಜೀವಿ.
ನೀರ್ಪಾಜೆಯವರು ಕನ್ನಡ, ಸಂಸ್ಕ್ರತ, ಹಿಂದಿ ಬಲ್ಲ ವಿದ್ವಾಂಸರು. ಕನ್ನಡ ಪಂಡಿತ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ಹಲವು ಕೃತಿ ರಚಿಸಿ ಸಾಹಿತ್ಯವನ್ನು ಬೆಳಗಿದವರಾದರೂ ಅದರ ಕೃತಕ ದಂತಗೋಪುರದೊಳಗೆ ಮುರುಟಿ ಕುಳಿತವರಲ್ಲ. ರಾಜಕೀಯ , ಸಾಮಾಜಿಕ ಚಟುವಟಿಕೆಗಳ ಮೂಲಕ ತಮ್ಮ ತಿಳಿವಳಿಕೆಯನ್ನು ಸಾರ್ಥಕಗೊಳಿಸಿದವರು. ಗಾಂಧೀಜಿಯವರ ತತ್ತ್ವಗಳಿಂದ ಪ್ರೇರಿತರಾಗಿ ಮದ್ಯಪಾನ ವಿರೋಧದಿಂದ ಹಿಡಿದು ಕನ್ಯಾನದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯನ್ನು ಕಟ್ತಿಸುವವರೆಗಿನ ತಮ್ಮ ಕನಸನ್ನು ಶ್ರಮವಹಿಸಿ ನನಸು ಮಾಡಿಕೊಂಡವರು. ರಾಜಕೀಯದಲ್ಲೂ ತಾನು ನಂಬಿದ ತತ್ವಗಳಿಗೆ ಬದ್ಧರಾಗಿ, ಅಡೆತಡೆಯನ್ನು ನಿವಾರಿಸಿ ಸುಧಾರಿಸಬಲ್ಲ ಸರಳ ಸಹೃದಯದೊಂದಿಗೆ, ಅನಿವಾರ್ಯವಾದಾಗ ನಿಷ್ಟುರವಾಗಿರಬಲ್ಲ ಕುಸುಮ ವಜ್ರಗಳ ಸಾಕ್ಷೀಪ್ರಜ್ಞೆ ಅವರದಾಗಿತ್ತು.
ಕನ್ಯಾನವೆಂಬ ಹಳ್ಳಿಯ ಭೀಮಭಟ್ಟರು ಮುಗ್ಧತೆಯ ಮಹಾವೀರ. ಅಪ್ಪಟ ಗಾಂಧೀವಾದಿ. ಬಡತನದ ಅರಿವಿದ್ದ ಅವರು ಕನ್ಯಾನ ಪಂಚಾಯತ್ ಅಧ್ಯಕ್ಷರಾಗಿದ್ದಾಗ ಬಡವರಿಗಾಗಿ ಜನತಾ ಮನೆಗಳನ್ನು ಮಾಡಿಕೊಡುವಲ್ಲಿ ದುಡಿದರು. ಊರಿಗೆ ರಸ್ತೆ. ನೀರಿನಂತಹ ಅವಶ್ಯಕ ಮೂಲ ಸೌಕರ್ಯಗಳಿಗಾಗಿ ಇಂದಿಗೂ ಅವರೂರ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ. ರಾಜಕೀಯದ ಒಳಸುಳಿಗಳನ್ನು ಬಲ್ಲವರಾದರೂ ತಮ್ಮ ಮಿತಿಯನ್ನು ಮೀರಿ ಹೋಗಲಾರರು. ಸಾಹಿತ್ಯ, ಸಹಕಾರ, ಸಮಾಜ, ಸಂಘಟನೆ, ಪತ್ರಕರ್ತರಾಗಿ ದೊರೆತ ಅನುಭವಕ್ಕಿಂತ ಭಿನ್ನವಾಗಿ ದೊರೆತ ರಾಜಕೀಯ ಅನುಭವ, ಅಲ್ಲಿಯ ಸಂಘರ್ಷ ಅವರನ್ನು ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿತು. ರಾಜಕೀಯಕ್ಕಾಗಿ ಉಳಿದ ಕ್ಷೇತ್ರಗಳನ್ನು ನಿರ್ಲಕ್ಷಿಸದೆ ಇದ್ದುದರಿಂದ ಅವರು ಸದಾ ಕ್ರಿಯಾಶೀಲರಾಗಿ ಇರುವಂತಾಯಿತು.
ಸಹಕಾರೀ ತತ್ವದಲ್ಲಿ ನಂಬಿಕೆ ಇರಿಸಿದ್ದ ಭೀಮಭಟ್ಟರು ದೀರ್ಘಕಾಲ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿದ್ದರು. ಆ ಸಂದರ್ಭದಲ್ಲಿ ಅವರು ಸಾಲಗಾರ ಕೃಷಿಕರ ಬಗ್ಗೆ ಉದಾರರಾಗಿದ್ದು ಸಾಲ ಕಟ್ಟಲು ಹೆಚ್ಚು ಸಮಯಾವಕಾಶ ನೀಡಿ ಮಾನವೀಯ ಗುಣ ತೋರಿಸಿದ ಉದಾಹರಣೆಗಳಿವೆ. ತನ್ನೂರಿನಿಂದ ತಾಲೂಕು ಕಚೇರಿಗೆ ಪ್ರತಿನಿತ್ಯ ಬಸ್ಸಿನಲ್ಲಿ ಬೇರೆಯವರ ಸಹಾಯಕ್ಕಾಗಿ, ಕೆಲಸಗಳಿಗಾಗಿ ಓಡಾಡುತ್ತಿದ್ದ ಇವರು ತಮಗಾಗಿ ಏನನ್ನೂ ಮಾಡಿಕೊಳ್ಳದ ಸಂತ. ಬರವಣಿಗೆ, ಅಭಿಮಾನೀ ಬಳಗ, ಮಾಡಿದ ಕೆಲಸದ ತೃಪ್ತಿ ಅವರ ಉಳಿತಾಯ ಖಾತೆಯಲ್ಲಿ ಜಮೆಯಾಗಿತ್ತಷ್ಟೆ.
ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಕೈಂಕರ್ಯವನ್ನು ಕೈಗೊಂಡ ನೀರ್ಪಾಜೆಯವರು ಇಲ್ಲಿಯ ಕಿರಿಯ ಬರಹಗಾರರನ್ನು ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದವರು. ದಕ್ಶಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅವರ ಅಧ್ಯಕ್ಷತೆ ಜಿಲ್ಲೆಯ ಜನರಿಗೆ ಸಂದ ಗೌರವ. ಅವರು ಕಿರಿಯರ ಬೆನ್ನುತಟ್ಟಿ, ಹಿಂದೆ ನಿಂತು ಕೆಲಸ ತೆಗೆಯ ಬೇಕಾದ ಸಂದರ್ಭದಲ್ಲಿ ಅವರಷ್ಟೇ ದುಡಿಯುವ ನಾಯಕ ಗುಣವನ್ನು ಹೊಂದಿದ್ದರು.
ಕಲ್ಹಣನ ರಾಜತರಂಗಿಣಿಯಂತಹ ಕ್ಲಿಷ್ಟ ಕೃತಿಯೊಂದನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪಡೆದು ಕನ್ನಡಿಗರೇ ಸಂಭ್ರಮಿಸುವಂತೆ ಮಾಡಿದಾಗ ಅವರಲ್ಲಿ ಹುಟ್ಟಿದ್ದು ತನ್ನಿಂದ ಇನ್ನೂ ಇಂತಹ ಕೆಲಸಗಳು ಬಹಳಷ್ಟು ಆಗಬೇಕು ಎಂಬ ಉತ್ಸಾಹ. ದಿನದ ಹದಿನೆಂಟು ಗಂಟೆಗಳ ಕಾಲ ದುಡಿಯುತ್ತಿದ್ದ ವ್ಯಕ್ತಿತ್ವದ ಸರಳ ಸಜ್ಜನಿಕೆಯ ನೀರ್ಪಾಜೆಯವರ ಒಳಗೊಬ್ಬ ವಿಡಂಬಕನಿದ್ದ ಎಂಬುದು ಬಹಳಷ್ಟು ಜನರಿಗೆ ಅರಿವಾದುದೇ ಅವರ ಹಾಸ್ಯ ಬರಹಗಳಿಂದ. ಚೌ, ಚೌ, ಅಂಟಿಕೊಳ್ಳದ ಅಸಾಮಿಗಳು, ಹಸ್ತಶುದ್ಧಿ ಎಂಬ ಹಾಸ್ಯ ಬರಹಗಳೊಂದಿಗೆ ವಾಗ್ಬಾಣದ ವಾಗ್ಭಟನ ಅಂಕಣಗಳು ತತ್ಕಾಲೀನ ರಾಜಕೀಯ ಸಾಮಾಜಿಕ ದೋಷಗಳಿಗೆ ಕನ್ನಡಿ ಹಿಡಿಯುತ್ತಿದ್ದವು.
ಕವಿ, ಚರಿತ್ರಕಾರ, ಸಾಮಾಜಿಕ ಕಳಕಳಿಯ ಚಿಂತಕ ಎಂದು ಗುರುತಿಸಲ್ಪಟ್ಟಿರುವ ಕಲ್ಹಣನ ರಾಜತರಂಗಿಣಿ ಚಾರಿತ್ರಿಕ ಮಹಾಕಾವ್ಯವೆಂದು ಹೆಸರು ಗಳಿಸಿದೆ. ಚರಿತ್ರೆಯನ್ನು ಸಮರ್ಪಕವಾಗಿ ನಿರೂಪಿಸಿದ ಕವಿ ಎಂದೂ ಈತನನ್ನು ಕೊಂಡಾಡಲಾಗುತ್ತದೆ. ಭೀಮ ಭಟ್ಟರ ಕನ್ನಡಾನುವಾದಕ್ಕೆ ಮುನ್ನುಡಿ ಬರೆದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರು ಅನೇಕ ಮಂದಿ ತಮಗೆ ಪತ್ರ ಬರೆದು ಕಲ್ಹಣನ ರಾಜತರಂಗಿಣಿಯನ್ನು ಪೂರ್ತಿಯಾಗಿ ಓದಬೇಕು ಎಂಬ ಆಸೆಯಾಗಿದೆ. ಅದನು ಕನ್ನಡದಲ್ಲಿ ತನ್ನಿ ಎಂದು ಆಗ್ರಹಪಡಿಸಿದ್ದನ್ನು ದಾಖಲಿಸಿದ್ದಾರೆ. ಅಲ್ಲೇ ಅವರು ಹೇಳುತ್ತಾರೆ “ನೀರ್ಪಾಜೆಯವರು ಕಲ್ಹಣನನ್ನು ಕನ್ನಡಕ್ಕೆ ತಂದಿರುವುದರಿಂದ ನನ್ನ ಕೆಲಸ ಸುಲಭವಾಯಿತು”. (ಕಲ್ಹಣನ ರಾಜತರಂಗಿಣಿ, ಅಭ್ಯುದಯ ಪ್ರಕಾಶನ, ೧೯೯೨ ). ಈ ರಾಜತರಂಗಿಣಿ ಐತಿಹಾಸಿಕ ಮಹತ್ವದ ಸಂಗತಿಗಳನ್ನು ನಿರೂಪಿಸುತ್ತದೆ. ಮಹತ್ವದ ದಾಖಲೆಗಳನ್ನು ನೀಡುತ್ತದೆ. ಇತಿಹಾಸಕ್ಕೆ ಅಪಚಾರ ಮಾಡದೆ ವಸ್ತುನಿಷ್ಟವಾಗಿ ಸಂಗತಿಗಳನ್ನು ನಿರೂಪಿಸಿದ ಅಧಿಕೃತ ದಾಖಲೆ ಗ್ರಂಥ ಎಂಬ ಅಭಿದಾನವೂ ಇದಕ್ಕಿದೆ
ಈ ಕೃತಿಯಲ್ಲಿ ಕಲ್ಹಣ ತನ್ನ ಕಾಲದ ರಾಜ ನೈತಿಕ ವಿಚಾರಗಳನ್ನು ನಿರೂಪಿಸಿದ್ದಾನೆ. ರಾಜರು ದೇವಸ್ಥಾನದ ಸೊತ್ತುಗಳನ್ನು ತಿನ್ನುವುದನ್ನು ಹೇಳಿದ್ದಾನೆ. ಅಂತಃಕಲಹ, ಸೋದರ ನಡುವೆ ಸಿಂಹಾಸನ ಏರಲು ಹೋರಾಟ ಮಾಡಬೇಕಾದ ಅಂದಿನ ಸಂದರ್ಭವನ್ನು ಹೇಳುವ ಕಲ್ಹಣ ಇನ್ನೇನು ಸಿಂಹಾಸನ ಏರಲು ತಯಾರಾಗಿರುವ ಹರ್ಷ ಸಿಂಹಾಸನ ಏರುವುದಕ್ಕೆ ಮೊದಲು ಎಂತಹ ಜೀವಭಯದ ಸ್ಥಿತಿಯಲ್ಲಿದ್ದಾನೆ ಎನ್ನುವುದನ್ನು “…ಅಲ್ಲಿ ಅವನೊಬ್ಬನೇ ಇದ್ದನು. ಗಿಡುಗಗಳಂತೆ ಇದ್ದ ಸೋದರರ ಬಳಿ ಆಮಿಷದಂತೆ ಸಿಲುಕಿರುವುದರಿಂದ ಅವನಿಗೆ ಭಯವು ಆವರಿಸಿತ್ತು. ಕುದುರೆಯ ಮೇಲೆ ಕುಳಿತುಕೊಂಡು ಅವನು ಅತ್ತಿತ್ತ ಪ್ರಾಣವನ್ನುಳಿಸಿಕೊಳ್ಳ ಬಯಸುವ ಪಕ್ಷಿಯಂತೆ ಒದ್ದಾಡುತ್ತಿದ್ದನು” (ಪುಟ ೧೮೬) ಎಂದು ರಾಜರ ಶೌರ್ಯಕ್ಕೂ ಒಂದು ಮಿತಿ ಇತ್ತು ಎಂಬ ಗೆರೆಯನ್ನು ಎಳೆಯುತ್ತಾನೆ. “ಮಳೆಗಾಲ ಬಂತೆಂದರೆ ಮರಕ್ಕೆ ಕಾಡ್ಗಿಚ್ಚಿನ ಹೆದರಿಕೆ ದೂರವಾಗುತ್ತದೆ. ಆದರೆ ಸಿಡಿಲಿನ ಭಯ ಇದ್ದೇ ಇರುತ್ತದೆ. ಸಮುದ್ರದಲ್ಲಿ ಮೊಸಳೆಯ ಬಾಯಿಯಿಂದ ತಪ್ಪಿಸಿಕೊಂಡು ಬಂದ ಮನುಷ್ಯನಿಗೆ ನೀರಿನಲ್ಲಿ ಮುಳುಗುವ ಭಯ ಮತ್ತೂ ಇರುತ್ತದೆ.. “ ಎಂಬ ಕಲ್ಹಣನ ಮಾತು, ರಾಜರಾದರೂ ತಮ್ಮ ನಂಬಿಕಸ್ತರು ಯಾವಾಗ ತಿರುಗಿ ಬೀಳುತ್ತಾರೋ , ಯಾವಾಗ ತನ್ನ ಪದಚ್ಯುತಿಯಾಗುತ್ತದೋ, ಮಕ್ಕಳು ಸೋದರರು ತಮ್ಮನ್ನು ಸೆರೆಯಲ್ಲಿಡಿಸುತ್ತಾರೋ ಎಂಬ ನಿರಂತರ ಚಿಂತೆಯನ್ನು, ಆತಂಕವನ್ನು ಹೊಂದಿರುವುದನ್ನು ಅತ್ಯಂತ ಸಮರ್ಪಕವಾಗಿ ಪ್ರತಿನಿಧಿಸುತ್ತದೆ. ಇಂದಿನ ಪಕ್ಷಾಂತರ, ನಿಷ್ಟಾಂತರಗಳಿಗೆ ಬಹುಧೀರ್ಘಕಾಲೀನ ಚರಿತ್ರೆ ಇದೆ ಎಂದು ಇಂದಿನವರು ನಿರ್ಲಿಪ್ತವಾಗಿ ಹೇಳಬಹುದಾದಷ್ಟು ರಾಜಕೀಯ ತಂತ್ರಗಾರಿಕೆಯ ಅಂಶಗಳನ್ನು ರಾಜತರಂಗಿಣಿ ಹೊಂದಿದೆ. ಕಬ್ಬಿಣದ ಕಡಲೆ ಎನ್ನುವಂತಿದ್ದ ಈ ಕೃತಿಯನ್ನು ಕನ್ನಡಕ್ಕೆ ತಂದು ನೀರ್ಪಾಜೆಯವರು ಕಲ್ಹಣ ದಾಖಲಿಸಿದ ಕಾಶ್ಮೀರದ ಅಂದಿನ ಸೌಂದರ್ಯ, ವಿಸ್ತಾರ, ಜೊತೆಗೆ ಯುದ್ದ ರಾಜಕಾರಣ ಮತ್ತು ವ್ಯೂಹ ರಾಜಕಾರಣವನ್ನು ಬಿಡಿಸಿಡುತ್ತಾರೆ.
ನೀರ್ಪಾಜೆಯವರು ತಮ್ಮ ಸಮಕಾಲೀನ ಹಿರಿಯ- ಕಿರಿಯ ಬರಹಗಾರೊಂದಿಗೆ ಮುಕ್ತವಾಗಿ ಸ್ನೇಹದಿಂದಿದ್ದರು, ಹಾ.ಮಾ. ನಾಯಕರು, ಕಯ್ಯಾರರು, ವೆಂಕಟಾಚಲಶಾಸ್ತ್ರಿಗಳಂತಹ ಹಿರಿಯರೊಂದಿಗೆ ಇಟ್ತುಕೊಂಡಿದ್ದ ಸ್ನೇಹ ಕಿರಿಯ ಬರಹಗಾರರೊಂದಿಗೂ ಇತ್ತು ಎನ್ನುವುದೇ ಅವರ ಸರಳತೆಗೆ , ವಿನಯವೆನ್ನುವುದು ಅವರ ಹಿರಿತನಕ್ಕೆ ಸಾಕ್ಷಿ. ಹಾಗಾಗಿ ಅವರು ಎಲ್ಲರಿಗೂ ಸನ್ಮಿತ್ರರಾಗಿ ಉಳಿದರು.
ನೀರ್ಪಾಜೆ ಭೀಮಭಟ್ಟರು 12-12-2002ರಂದು ವಿಧಿವಶರಾದರು. ಅಂತಿಮ ದಿನಗಳಲ್ಲಿ ಗಂಭೀರವಾದ ಅನಾರೋಗ್ಯ ಕಾಡುತ್ತಿದ್ದಾಗಲೂ ಅವರು ಮಾಡಬಹುದಾದ ಹಲವು ಕೆಲಸಗಳು ಅವರನ್ನು ಕಾಡುತ್ತಲೇ ಇದ್ದವು. ಸದಾ ಕ್ರಿಯಾಶೀಲರಾಗಿದ್ದ ಭೀಮಭಟ್ಟರಿಗೆ ಅದು ಅಸಹಜವಲ್ಲ. ಸರಳವಾದ ಆದರೆ ದೊಡ್ದ ಯೋಚನೆಗಳ ವ್ಯಕ್ತಿತ್ವದ ಅವರ ಬದುಕು ಅವರ ಸ್ನೇಹಿತರನ್ನು, ಅಭಿಮಾನಿಗಳನ್ನು ಸದಾ ಕಾಡುತ್ತಿದೆ. ನೀರ್ಪಾಜೆ ಭೀಮಭಟ್ಟ ಅಭಿಮಾನೀ ಬಳಗ ಬಂಟ್ವಾಳ ಹೆಸರಿನಲ್ಲಿ ಅವರ ಅಭಿಮಾನಿಗಳು ಸೇರಿ ಪ್ರತೀ ವರ್ಷ ದಶಂಬರ ತಿಂಗಳಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ ’ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ ನೀಡುತ್ತಿದ್ದಾರೆ. ದಿನಾಂಕ 25-12-2020 ರಂದು ಈ ಬಾರಿ ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಯಕ್ಷಗಾನ ವಿಮರ್ಶಕ, ವಿದ್ವಾಂಸ, ಅರ್ಥಧಾರಿ ಡಾ. ಪ್ರಭಾಕರ ಜೋಷಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.