ಬಂಟ್ವಾಳ: ತಾಲೂಕಿನ 57 ಗ್ರಾಪಂಗಳಿಗೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ಸಾಲಿನಲ್ಲಿ ನಿಂತುಕೊಂಡು ಮಾಸ್ಕ್ ಧರಿಸಿದ ಮತದಾರರು, ಓಟು ಹಾಕಲು ಆಗಮಿಸುತ್ತಿರುವುದು ಕಂಡುಬಂತು. ಈ ಬಾರಿ ಬ್ಯಾಲೆಟ್ ಪೇಪರ್ ನಲ್ಲಿ ಮತದಾನ ಮಾಡಬೇಕಿರುವ ಕಾರಣ, ಮತದಾರರು ತಾವು ಮತ ಚಲಾಯಿಸಬೇಕಾದ ಅಭ್ಯರ್ಥಿಯ ವಿವರ, ಚಿಹ್ನೆಗಳನ್ನು ಮೊದಲೇ ಮನನ ಮಾಡಿಕೊಂಡು ಮತದಾನ ಕೇಂದ್ರಕ್ಕೆ ಹೋಗಲು ಅಣಿಯಾಗುತ್ತಿದ್ದರು. ಬಂಟ್ವಾಳ ತಾಲೂಕಿನ 396 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.57 ಗ್ರಾಪಂಗಳ 822 ಸ್ಥಾನಗಳಿಗೆ ನಡೆಯಲಿದ್ದು, ಒಟ್ಟು 2,75,097 ಮಂದಿ ಹಕ್ಕು ಚಲಾಯಿಸಲು ಅವಕಾಶವಿದೆ. ಪ್ರತಿ ಬೂತ್ ಗೆ ತಲಾ 6ರಂತೆ ಒಟ್ಟು 2376 ಮಂದಿ ತಮಗೆ ನಿಗದಿಪಡಿಸಲಾಗಿರುವ ಬೂತ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, 822 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ, 1925 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46 ಅತಿಸೂಕ್ಷ್ಮ, 86 ಸೂಕ್ಷ್ಮ ಹಾಗೂ 264 ಸಾಮಾನ್ಯ ಮತಗಟ್ಟೆಗಳು ಸೇರಿ ಒಟ್ಟು 396 ಮತಗಟ್ಟೆಗಳು ತಾಲೂಕಿನಲ್ಲಿವೆ.