ಮಂಗಳೂರು: ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರಾಗಿದ್ದ ಮಾಧವ ಮಾವೆ, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಪಂ ಸದಸ್ಯತ್ವಕ್ಕೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಕುಮಾರ ಭಟ್ ಬದಿಕೋಡಿ ಸಹಿತ ಹಲವರು ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಬಿಜೆಪಿಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡರು.
ಬಿಜೆಪಿ ರಾಜ್ಯಧ್ಯಾಕ್ಷ ನಳಿನ್ ಕುಮಾರ್ ಕಟೀಲು,ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ,ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸಮ್ಮುಖದಲ್ಲಿ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಹಿಂದಷ್ಟೇ ತಾಪಂ ಸದಸ್ಯ ಸ್ಥಾನಕ್ಕೆ ಕುಮಾರ ಭಟ್ ರಾಜೀನಾಮೆ ನೀಡಿದ್ದರು. ಇದೀಗ ಮಾವೆ ದಂಪತಿ ಕಾಂಗ್ರೆಸ್ ತ್ಯಜಿಸಿದ್ದು, ಬಿಜೆಪಿಗೆ ಮತ್ತಷ್ಟು ಕಾಂಗ್ರೆಸ್ ನಾಯಕರು ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.ದ.ಕ. ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನ ಹತ್ತಾರು ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಕಾಂಗ್ರೆಸ್ಗೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಏಕ ನಾಯಕತ್ವದ ನರೇಂದ್ರ ಮೋದಿ ಪಕ್ಷದಲ್ಲಿ ಎಲ್ಲರಿಗೂ ವಿಶ್ವಾಸ ಮೂಡುತ್ತಿದೆ. ಇದೇ ಕಾರಣದಿಂದ ಎಲ್ಲರೂ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.