ಬಂಟ್ವಾಳ: ಡಿ.22ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಗುರುವಾರ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗಗಳಲ್ಲಿ ನಡೆಯಿತು.
ಒಟ್ಟು 57 ಗ್ರಾಮ ಪಂಚಾಯಿತಿಗಳ 822 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಹೆಚ್ಚುವರಿ ಮತಗಟ್ಟೆಗಳೂ ಸೇರಿದಂತೆ 436 ಮತಗಟ್ಟೆಗಳ 872 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನಡೆಯಿತು.
ಎರಡೂ ಶಾಲೆಗಳ 22 ಕೊಠಡಿಗಳಲ್ಲಿ ಮಾಸ್ಟರ್ ಟ್ರೈನರ್ಸ್ ಗಳಾದ ಮೋಹನ್ ಎನ್, ಉದಯ ಕುಮಾರ್, ಸತನ್ ರಾಮ್ ಮಾರ್ಗದರ್ಶನದಲ್ಲಿ 44 ಚುನಾವಣಾಧಿಕಾರಿಗಳು ತರಬೇತಿ ನೀಡಿದರು. ತಹಸೀಲ್ದಾರ್ ರಶ್ಮಿ ಎಸ್.ಆರ್, ಚುನಾವಣಾ ಶಾಖೆಯ ಉಪತಹಸೀಲ್ದಾರ್ ರಾಜೇಶ್ ನಾಯ್ಕ್ ಸಹಿತ ಕಂದಾಯ ಇಲಾಖಾಧಿಕಾರಿಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಇದೇ ವೇಳೆ ಅಂಚೆ ಮತಪತ್ರದ ಸಿದ್ಧತೆಗಳನ್ನೂ ಮಾಡಲಾಯಿತು.