ಯಕ್ಷಗಾನ

ಡಿ.20ರಂದು ವೇಷರಹಿತ ಆನ್ಲೈನ್ ಯಕ್ಷಗಾನ ಪ್ರದರ್ಶನ.. ಏನಿದು ವೇಷರಹಿತ ಯಕ್ಷಗಾನ?

ಆನ್ಲೈನ್ ಯಕ್ಷಗಾನ ಪ್ರದರ್ಶನಗಳು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ನೋಡಬಹುದು ಎಂಬ ಥೀಮ್ ಜನಪ್ರಿಯವಾದ ಮೇಲೆ ಈಗ ಹಲವು ಹೊಸ ಪ್ರಯೋಗಗಳನ್ನೂ ಯಕ್ಷಾಭಿಮಾನಿಗಳು ಮಾಡುತ್ತಿದ್ದಾರೆ. ವೇಷ ಧರಿಸದೆ ಒಂದಿಡೀ ಯಕ್ಷಗಾನವನ್ನು ಅಭಿನಯಿಸಿ ತೋರಿಸುವ ವೇಷರಹಿತ ಯಕ್ಷಗಾನ ಪ್ರದರ್ಶನಕ್ಕೆ ತಂಡವೊಂದು ಸಜ್ಜಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಂತರ್ಜಾಲದ ಮೂಲಕ ಇಂಥ ಪ್ರದರ್ಶನ ಪ್ರಯೋಗವೊಂದು ನಡೆಯುತ್ತಿರುವುದು ಇದೇ ಪ್ರಥಮ.

ಬಂಟ್ವಾಳ ತಾಲೂಕಿನ ಮಂಚಿ ಹಾಗೂ ಬಿ.ಸಿ.ರೋಡಿನ ಉತ್ಸಾಹಿ ತರುಣರೇ ಇದರ ರೂವಾರಿಗಳು. ಯಕ್ಷನೂಜಿಪ್ಪಾಡಿ ಎಂಬ ಕಲಾತಂಡದ ಮೂಲಕ ವೇಷರಹಿತ ಯಕ್ಷಗಾನದ ಲೈವ್ ಪ್ರದರ್ಶನವನ್ನು ಅವರು ಯೂಟ್ಯೂಬ್ ಮತ್ತು ಫೇಸ್ ಬುಕ್ ಲೈವ್ ನಲ್ಲಿ ಯಕ್ಷನೂಜಿಪ್ಪಾಡಿ ಹೆಸರಲ್ಲೇ ಪ್ರದರ್ಶಿಸಲಿದ್ದಾರೆ. ಡಿಸೆಂಬರ್ 20ರಂದು ಸಂಜೆ 5ರಿಂದ ಮೇದಿನಿ ನಿರ್ಮಾಣ ಭೂ ಉದ್ಧರಣ ಪ್ರಸಂಗ ಪ್ರದರ್ಶನ ನಡೆಯುತ್ತದೆ.

ಏನಿದು ವೇಷರಹಿತ ಪ್ರದರ್ಶನ:

ಯಕ್ಷಗಾನವೆಂದರೆ ಬಣ್ಣಬಣ್ಣದ ವೇಷಗಳು ಕಣ್ಣಿಗೆ ಕಟ್ಟುತ್ತವೆ. ಪಾತ್ರಗಳನ್ನು ವೇಷಗಳೊಳಗೆ ನೋಡುವ ಪ್ರೇಕ್ಷಕನನ್ನು ತಾಳಮದ್ದಲೆಯಲ್ಲೂ ಹಿಡಿದಿಟ್ಟುಕೊಳ್ಳುವ ಬಗೆ ಇನ್ನೊಂದು. ತಾಳಮದ್ದಲೆಯಲ್ಲಾದರೆ ಕುಳಿತುಕೊಂಡು ಅರ್ಧ ಹೇಳುತ್ತಾರೆ. ಇಲ್ಲಿ ಮಾತಿಗೇ ಪ್ರಾಧಾನ್ಯತೆ. ಆದರೆ ರಂಗಸ್ಥಳದಲ್ಲಿ ಹಾಗಲ್ಲ. ಪಾತ್ರಕ್ಕೊಪ್ಪುವ ವೇಷ, ಅದಕ್ಕೆ ತಕ್ಕಂತೆ ಅಭಿನಯ, ನಾಟ್ಯ ಬೇಕು. ಸಾಮಾನ್ಯವಾಗಿ ಅಧ್ಯಯನ ಶಿಬಿರಗಳಲ್ಲಿ, ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ವೇಷ ಧರಿಸದೆ ಅಭಿನಯ ಮಾಡುವುದುಂಟು. ಆಗ ಇಜಾರು (ಪ್ಯಾಂಟು), ಬನಿಯನ್, ಗೆಜ್ಜೆ ಧರಿಸಿ ಅಭಿನಯ ಮಾಡಲಾಗುತ್ತದೆ. ಪ್ರಸಂಗ ಅಧ್ಯಯನ ಶಿಬಿರಗಳಲ್ಲೂ ಇಂಥದ್ದನ್ನು ಮಾಡಲಾಗುತ್ತದೆ. ಆದರೆ ಇವು ಶಿಬಿರಗಳಿಗಷ್ಟೇ ಮೀಸಲಾಗಿರುತ್ತದೆ. ಅದನ್ನೇ ಪ್ರದರ್ಶನ ಮಾಡುವುದು ಈಗ ನಡೆಯುತ್ತಿರುವ ಹೊಸ ಪ್ರಯೋಗ.

ನೂಜಿಪ್ಪಾಡಿ ತಂಡ:

ಬೇರೆ ಬೇರೆ ಉದ್ಯೋಗ, ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ಟೀಮ್ ನೂಜಿಪ್ಪಾಡಿಯ ಸದಸ್ಯರು ಇಂಥದ್ದೊಂದು ಪ್ರಯೋಗಕ್ಕೆ ಹೊರಟಿದ್ದು, ಈಗಾಗಲೇ ಐದಾರು ಇಂಥ ಪ್ರದರ್ಶನಗಳು ಮನೆ ಮನೆಗಳಲ್ಲಿ ಆಗಿವೆ. ೨೦೧೯ರಲ್ಲಿ ನೂಜಿಪ್ಪಾಡಿಯಲ್ಲಿ ಬಣ್ಣಗಾರಿಕೆ ಶಿಬಿರ ಏರ್ಪಟ್ಟಿದ್ದಾಗ ಪ್ರಾಯೋಗಿಕವಾಗಿ ವೇಷರಹಿತ ದೇವಿ ಮಹಾತ್ಮೆ ಪ್ರಸಂಗ ಸುಮಾರು ೫ ಗಂಟೆಯ ಅವಯಲ್ಲಿ ನಡೆದಿತ್ತು, ಕಿಶನ್ ಹೊಳ್ಳ ನೂಜಿಪ್ಪಾಡಿ, ನರಸಿಂಹ ಮಯ್ಯ ಅಲೆತ್ತೂರು, ಗಣೇಶ್ ಹೆಗಡೆ ಬಂಟ್ವಾಳ, ಸಚಿನ್ ಹೊಳ್ಳ ಕಳ್ಳಿಮಾರು, ರಾಘವೇಂದ್ರ ಕಾರಂತ ಮೊಗರ್ನಾಡು, ವೇಣುಗೋಪಾಲ ಕೆ, ಶ್ರೀಧರ ಎ.ಪಿ.ರಾವ್, ಯಜ್ಞನಾರಾಯಣ ಐತಾಳ್, ರಾಮಕೃಷ್ಣ ಐತಾಳ್. ರಶ್ಮಿ ಎಂ.ಪಿ., ವಸುಧಾ ಜಿ.ಎನ್. ಹಿಮ್ಮೇಳಕ್ಕೆ ವಿಶ್ವಾಸ ಭಟ್ ಕರ್ಬೆಟ್ಟು, ಶ್ರೀವತ್ಸ ಸೋಮಯಾಜಿ, ನವೀನಚಂದ್ರ ಆಚಾರ್ಯ, ಸಂದೇಶ್ ರಾವ್ ಬಿ. ಯಕ್ಷನೂಜಿಪ್ಪಾಡಿ ತಂಡದಲ್ಲಿದ್ದಾರೆ.

ಅಭಿನಯ ಸವಾಲು:

ವೇಷ ಇಲ್ಲದಿದ್ದಾಗ ಪಾತ್ರಕ್ಕೆ ಜೀವಕಳೆ ತುಂಬುವುದು ದೊಡ್ಡ ಸವಾಲು ಎನ್ನುತ್ತಾರೆ ಕಿಶನ್ ಹೊಳ್ಳ ನೂಜಿಪ್ಪಾಡಿ. ಪ್ರೇಕ್ಷಕನಿಗೆ ವೇಷಸಹಿತ ಕಲಾವಿದ ಎದುರು ನಿಂತಾಗ ವೇಷದ ಕಡೆಗೂ ಗಮನ ಹೋಗುತ್ತದೆ. ಆದರೆ ಅದಿಲ್ಲದಿದ್ದರೆ, ನಮ್ಮ ಅಭಿನಯ, ಹಾವಭಾವಗಳ ಮೂಲಕ ಪ್ರೇಕ್ಷಕನಿಗೆ ವೇಷರಹಿತವಾಗಿಯೂ ಯಕ್ಷಗಾನವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ. ಹಿರಿಯ ಕಲಾವಿದ ಕರ್ಗಲ್ಲು ವಿಶ್ವೇಶ್ವರ ಭಟ್ಟರು ನಮ್ಮ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರಿಂದಲೂ ಉತ್ತಮ ಸ್ಪಂದನೆ ದೊರಕಿದೆ ಎನ್ನುತ್ತಾರೆ ಅವರು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts