ಪ್ರಮುಖ ಸುದ್ದಿಗಳು

ಪೋಳ್ಯದಲ್ಲಿ ರಸ್ತೆ ಅಪಘಾತ: ಹಿರಿಯ ಆರೆಸ್ಸೆಸ್ ಮುಖಂಡ ವೆಂಕಟರಮಣ ಹೊಳ್ಳ ನಿಧನ

ಬಂಟ್ವಾಳ:  ಪುತ್ತೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಪೋಳ್ಯ ಎಂಬಲ್ಲಿ ಮಂಗಳವಾರ ನಸುಕಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ರಾಷ್ಟ್ರೀ ಸ್ವಯಂಸೇವಕ ಸಂಘದ ಪ್ರಮುಖರೂ, ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖರೂ ಆಗಿರುವ ವೆಂಕಟರಮಣ ಹೊಳ್ಳ (60) ಮೃತಪಟ್ಟಿದ್ದಾರೆ.

ಸೋಮವಾರ ಬೈಠಕ್ ಮುಗಿಸಿ, ಪುತ್ತೂರಿನಲ್ಲೇ ತಂಗಿದ್ದ ಅವರು, ಮಂಗಳವಾರ ಬೆಳಗ್ಗೆ ಬೈಕ್ ನಲ್ಲಿ ಬಿ.ಸಿ.ರೋಡಿನ ಅಗ್ರಬೈಲ್ ನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ,ಪೋಳ್ಯದಲ್ಲಿ ಅಪಘಾತ ಸಂಭವಿಸಿದೆ. ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಬೈಕ್ ಬಿದ್ದಿತ್ತು.

ಆರೆಸ್ಸೆಸ್ ಸ್ವಯಂಸೇವಕರಾಗಿ ಬಾಲ್ಯದಿಂದಲೇ ಗುರುತಿಸಿಕೊಂಡಿದ್ದ ಅವರು ರಾಷ್ಟ್ರೀಯ ನಾಯಕರ ಗಮನವನ್ನೂ ಸೆಳೆದವರು. ಆರೆಸ್ಸೆಸ್ ನ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಹೊಳ್ಳರು, ಸರಳ ಜೀವಿಯಾಗಿ ಪಾದರಕ್ಷೆಗಳನ್ನು ಧರಿಸದೆ, ಸರಳ ಶ್ವೇತವಸ್ತ್ರದ ಉಡುಗೆಯೊಂದಿಗೆ ಸಂಚರಿಸುತ್ತಿದ್ದರು. ಇತ್ತೀಚೆಗೆ ಗ್ರಾಮವಿಕಾಸ ಸಮಿತಿಯ ಮಂಗಳೂರು ವಿಭಾಗ ಸಂಚಾಲಕರಾಗಿ ಬಿ.ಸಿ.ರೋಡ್, ಸುಳ್ಯ, ಪುತ್ತೂರು ಸಹಿತ ಹಲವೆಡೆ ಯುವಕರಿಗೆ ಆತ್ಮನಿರ್ಭರರಾಗುವ ಉದ್ಯೋಗ ತರಬೇತಿಯನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು.

ಜಾಹೀರಾತು

ಹೊಳ್ಳರು, ದಶಕಗಳಿಂದಲೇ ಹಲವು ತರುಣರನ್ನು ಹುಡುಕಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆ ಮಾಡುತ್ತಿದ್ದರು. ಹೀಗೆಯೇ ಸೇರಿದವರ ಪೈಕಿ ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ವೆಂಕಟರಮಣ ಹೊಳ್ಳರು ಗುರು, ಮಾರ್ಗದರ್ಶಕರಾಗಿದ್ದರು. ಅವರ ಮನೆಯಲ್ಲಿಯೇ ಸಂಘದ ಶಿಕ್ಷಣವನ್ನು ನಳಿನ್ ಪಡೆದಿದ್ದರು. ಅದೇ ರೀತಿ ಸಾವಿರಾರು ಯುವಕರಿಗೆ ಹೊಳ್ಳರು ಮಾರ್ಗದರ್ಶನ ನೀಡಿದ್ದಾರೆ. ಬಿ.ಸಿ.ರೋಡಿನ ಹೃದಯಭಾಗದಲ್ಲಿಯೇ ಶುದ್ಧ ಸಾವಯವ ಕೃಷಿಯನ್ನು ಮಾಡುವ ಮೂಲಕ ಸಾವಯವ ಪ್ರಗತಿಪರ ಕೃಷಿಕರಾಗಿಯೂ ಹೊಳ್ಳರು ಗಮನ ಸೆಳೆದವರು.

ಅವರ ನಿಧನಕ್ಕೆ ಆರೆಸ್ಸೆಸ್ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಸಹಿತ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.