ಬಂಟ್ವಾಳ: ತುಂಬೆ ಗ್ರಾಪಂ ಪಿಡಿಒ ಚಂದ್ರಾವತಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಚಾರದ ಕುರಿತು ಸೂಕ್ತ ಕ್ರಮವನ್ನು ಆರೋಪಿ ವಿರುದ್ಧ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಅಧ್ಯಕ್ಷ ಪಿ.ಎಚ್.ಪ್ರಕಾಶ್ ಶೆಟ್ಟಿ ನೊಚ್ಚ ನೇತೃತ್ವದಲ್ಲಿ ತಹಸೀಲ್ದಾರ್ ರಶ್ಮಿ ಎಸ್.ಆರ್. ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಪಂಚಾಯತ್‌ನ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾ..ಪಂ.ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೇ ಚುನಾವಣೆಗೆ ಸಂಬಂದಪಟ್ಟ ಕಾಗದ ಪತ್ರಗಳನ್ನು ಎಸೆದು ಜೀವ ಬೆದರಿಕೆ ಒಡ್ಡಿದ್ದಾಗಿ ಪ್ರವೀಣ್ ತುಂಬೆ ವಿರುದ್ಧ ಆರೋಪಿಸಲಾಗಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾ ಸಂಘದ ಕೋಶಾಧಿಕಾರಿ ಡಿ ಪ್ರಶಾಂತ್ ಬಳಂಜ, ಗ್ರಾ.ಪಂ. ಕಾರ್‍ಯದರ್ಶಿಗಳ ಜಿಲ್ಲಾ ಸಂಘದ ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್,ತಾಲೂಕು ಸಂಘದ ಅಧ್ಯಕ್ಷರಾದ ಗೋಕುಲದಾಸ ಭಕ್ತ, ಕಾರ್‍ಯದರ್ಶಿ ಚಂದ್ರಾವತಿ, ಪದಾಧಿಕಾರಿಗಳಾದ ಅಶೋಕ ಕುಮಾರ್, ಟ್ರೆಸ್ಸಿ ರೊಡ್ರಿಗಸ್, ವೈಲೆಟ್ ಮಿನೇಜಸ್, ಬೆಳ್ತಂಗಡಿ ತಾಲೂಕು ಸಂಘದ ಗಣೇಶ್ ಪೂಜಾರಿ, ಜಿಲ್ಲಾ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ವೆಂಕಪ್ಪ ಮತ್ತಿತರರು ಉಪಸ್ಥಿತರಿದ್ದರು.