ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಯಾಗಲು ಆಕಾಂಕ್ಷೆ ಇರುವವರು ನಾಮಪತ್ರ ಸಲ್ಲಿಕೆಗೆ ಪೂರಕ ದಾಖಲೆಗಳನ್ನು ಒದಗಿಸಲು ಈಗ ಬಂಟ್ವಾಳದ ಮಿನಿ ವಿಧಾನಸೌಧಕ್ಕೆ ದೌಡಾಯಿಸುತ್ತಿದ್ದಾರೆ. ನಾಮಪತ್ರಕ್ಕೆ ಬೇಕಾದ ಜಾತಿ ಫಾರಂ ಗಳನ್ನು ಭರ್ತಿ ಮಾಡುವ ವೇಳೆ ಅಗತ್ಯವಿರುವ ದಾಖಲೆಗಳನ್ನು ಕ್ರೋಢೀಕರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಆಕಾಂಕ್ಷಿಗಳು ಹಾಗೂ ಅವರ ಪರ ಕಾರ್ಯಕರ್ತರು ಬೆಳಗ್ಗಿನಿಂದಲೇ ಆಗಮಿಸುತ್ತಿದ್ದರು. ಬುಧವಾರವರೆಗೆ ಸುಮಾರು 700ರಷ್ಟು ಅರ್ಜಿಗಳನ್ನು ತಹಸೀಲ್ದಾರ್ ವಿಲೇವಾರಿ ಮಾಡಿದ್ದು, ಗುರುವಾರ ಇದು ಇನ್ನೂ ಜಾಸ್ತಿಯಾಗುವ ಸೂಚನೆ ಇದೆ. ಬಂಟ್ವಾಳ ತಾಲೂಕಿನ 57 ಗ್ರಾಪಂಗಳಲ್ಲಿ 837 ಸ್ಥಾನಗಳಿದ್ದು, ಕನಿಷ್ಠ 1700ರಷ್ಟಾದರೂ ನಾಮಪತ್ರ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಗುರುವಾರ ಗರಿಷ್ಠ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ಇಂದು ಸ್ಪರ್ಧಾಕಾಂಕ್ಷಿಗಳೊಂದಿಗೆ ಅವರ ಬೆಂಬಲಿಗರ ಚಿತ್ತ ಚುನಾವಣೆಯತ್ತ ನೆಟ್ಟಿದೆ. ಈ ಮಧ್ಯೆ ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರ ಲಿಸ್ಟ್ ಫೈನಲ್ ಮಾಡಿದ್ದು, ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಬೇಟೆಯಲ್ಲೂ ತೊಡಗಿವೆ.