ಜಿಲ್ಲಾ ಸುದ್ದಿ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ, ಪಾನ್ ಮಸಾಲ ಜಗಿದು ಉಗುಳುವುದು ಶಿಕ್ಷಾರ್ಹ ಅಪರಾಧ – ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಸೇವನೆ ಹಾಗೂ ತಂಬಾಕು ಉತ್ಪನ್ನ ಜಗಿದು ಉಗಿಯುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.  ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಸಭೆಯನ್ನುದ್ದೇಶಿ ಮಾತನಾಡಿದರು.

ಡಾ. ಕೆ.ವಿ.ರಾಜೇಂದ್ರ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ್ದು ಇದನ್ನು ಉಲ್ಲಂಘನೆ ಮಾಡಿದವರಿಗೆ ರೂ. 200 ಗಳ ದಂಡ ವಿಧಿಸಲಾಗುವುದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಪಾನ್ ಮಸಾಲಗಳನ್ನು ಜಗಿದು ಉಗುಳುವುದರಿಂದ ಕೊವಿಡ್-19 ಹಾಗೂ ಇತರೆ ಸಾಂಕ್ರಾಮಿಕ ರೋಗಗಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ  ಇದನ್ನು ನಿಷೇಧಿಸಿದ್ದು, ಉಲ್ಲಂಘಿಸಿದವರಿಗೆ ಐಪಿಸಿ ಸೆಕ್ಷನ್ ಭಾ.ದಂ.ಸಂ ಸೆಕ್ಷನ್ 188, 268, 269 ಮತ್ತು 270 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶಾಲಾ ಕಾಲೇಜು ಆವರಣಗಳ 100 ಮೀಟರ್ ಅಂತರದಲ್ಲಿ ತಂಬಾಕು, ಗುಟ್ಕಾ ಮಾರಾಟ ಮಾಡುವುದು ಹಾಗೂ ಸೇವನೆ ಮಾಡುವುದನ್ನು ನಿμÉೀಧಿಸಲಾಗಿದೆ, ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಎಚ್ಚರಿಕೆ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ಇದನ್ನು ಉಲ್ಲಂಘಿಸಿದರೆ ಕಾನೂನು ರೀತಿಯ ಕ್ರಮ ಕೈಗೊಂಡು ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಬೇಕು  ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಿಗೆ  ತಂಬಾಕು ಉತ್ಪನ್ನ ಸೇವನೆಯಿಂದ ಮಾರಣಾಂತಿಕ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. 18 ವರ್ಷದೊಳಗಿನವರೆಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಹಾಗೂ ಅವರಿಂದ ಮಾರಾಟ ಮಾಡಿಸುವುದು ಶಿಕ್ಷಾರ್ಹ ಅಪರಾಧ ಎಂದ ಅವರು, ತಂಬಾಕು ಉತ್ಪನ್ನಗಳ ಕುರಿತು ಜಾಹಿರಾತು ಪ್ರಚಾರ, ಪ್ರಯೋಜಕತ್ವದ ಫಲಕಗಳನ್ನು ಪ್ರದರ್ಶಿಸುವುವುದು ಅಪರಾಧ ಅಂತವರಿಗೆ ರೂ. 1000/- ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಎರಡನೇ ಅಲೆ ತಡೆಗಟ್ಟಿ:  ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು ಎರಡನೇ ಅಲೆ ಹರಡುವ ಸಾಧ್ಯತೆ ಹಿನ್ನೆಲೆ ತಡೆಗಟ್ಟಲು ಮುಂದಾಗಬೇಕು  ಹೆಚ್ಚು ಕೋವಿಡ್ ಪರೀಕ್ಷೆಗಳನ್ನು  ಮಾಡಬೇಕು. ಹಾಗೂ ಕೋವಿಡ್ ಸೋಂಕು ಹೊಂದಿರುವವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಿಗೂ ಸಹಕೋವಿಡ್ ಪರೀಕ್ಷೆ ಮಾಡಬೇಕು ಎಂದು ವೈದ್ಯಾಧಿಕಾರಿಗಳು ಸೂಚನೆ ನೀಡಿದರು.
  ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆ ಕೋವಿಡ್ ಸೋಂಕು ಹರಡುವ ಸಾಧ್ಯತೆಗಳಿವೆ. ಇವುಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ರಾತ್ರಿ ಸಮಯದಲ್ಲಿ ತುರ್ತು ಸೇವೆಗಳ 108 ಅಂಬ್ಯುಲೆನ್ಸ್ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ, ಈ ಬಗ್ಗೆ ಅಗತ್ಯ ಕ್ರಮ ವಹಿಸಬೇಕು ಸಂಬಂಧಪಟ್ಟ ಏಜೆನ್ಸಿಗಳು ಸ್ಪಂದಿಸದಿದ್ದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಬೇಕೆಂದು ಸೂಚನೆ ನೀಡಿದರು.
  ಜಿಲ್ಲೆಯ ಅಬಕಾರಿ ಇಲಾಖೆಯು ಎಲ್ಲಾ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳ ಪ್ರವೇಶ ದ್ವಾರದಲ್ಲಿ ಕೋಟ್ಪಾ ಕಾಯ್ದೆಯ ನಾಮಫಲಕ ಪ್ರದರ್ಶಿಸಿ ಧೂಮಪಾನ ಮುಕ್ತ ವಾತಾವರಣವಾಗಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
   ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಗಳನ್ನು ಪ್ರತಿ 3 ತಿಂಗಳಿಗೊಮ್ಮೆ ಮಾಡಬೇಕೆಂದರು, ಇದರ ಜೊತೆಗೆ ಸಂಬಂಧಿಸಿದಂತೆ ಆಯಾ ತಾಲೂಕಿನ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮಿತಿ ಸಮನ್ವಯ ಸಭೆಯನ್ನು ನಡೆಸಬೇಕು ಎಂದು ಹೇಳಿದರು.
 ಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ಈವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಇನ್ನಿತರ ಒಟ್ಟು 4,778 ಪ್ರಕರಣಗಳು ದಾಖಲಾಗಿದ್ದು, ರೂ. 3,08,050  ದಂಡ ವಸೂಲಿ ಮಾಡಲಾಗಿದೆ ಎಂದು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಂಯೋಜಕ ಡಾ. ಹನುಮಂತ ರಾಯಪ್ಪ ಸಭೆಗೆ ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ವೈದ್ಯಕೀಯ ಅಧೀಕ್ಷಕರು ಲೇಡಿಗೋಶನ್ ಡಾ. ದುರ್ಗಾ ಪ್ರಸಾದ್, ಜಿಲ್ಲಾ ಸರ್ಜನ್ ಹಾಗೂ ಅಧೀಕ್ಷಕರು ಸದಾಶಿವ ಶಾನ್‍ಭೋಗ್, ಜಿಲ್ಲಾ ಸರ್ವೇಕ್ಷಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಜಗದೀಶ್, ಮತ್ತಿತತರ ಅಧಿಕಾರಿಗಳು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ