ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಪುಂಜಾಲಕಟ್ಟೆ ಘಟಕ ಸಮಿತಿಯ ವತಿಯಿಂದ ಡಿ.25ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿರುವ ತೃತೀಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರವಿವಾರ ಪುಂಜಾಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಭವನದಲ್ಲಿ ಜರಗಿತು.
ಸಮಿತಿ ಗೌರವಾಧ್ಯಕ್ಷ ಜಯಂತ್ ಶೆಟ್ಟಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,ಫೌಂಡೇಶನ್ ವತಿಯಿಂದ ನಡೆಯುವ ಯಕ್ಷ ತರಬೇತಿ ತರಗತಿಯಿಂದ ಪರಿಸರದ ಮಕ್ಕಳು ಯಕ್ಷಗಾನದ ಬಗ್ಗೆ ಒಲವನ್ನು ಬೆಳೆಸಲು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಂದ ವಾರ್ಷಿಕೋತ್ಸವ ದಿನ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಯಕ್ಷ ಕಲಾವಿದ, ಸಹ ಸಂಚಾಲಕ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಕಾರ್ಯಕ್ರಮದ ಮಾಹಿತಿ ನೀಡಿ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಅಧ್ಯಕ್ಷತೆ ವಹಿಸಲಿರುವರು. ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ಅರ್ಥಧಾರಿ ಉಮೇಶ್ ಪೂಜಾರಿ ಬುಳೆಕ್ಕಿನಕೋಡಿ ಅವರನ್ನು ಸಮ್ಮಾನಿಸಲಾಗುವುದು. ಮಧ್ಯಾಹ್ನ ಶ್ರೀ ಕೃಷ್ಣ ಲೀಲೆ, ಪಾಂಚಜನ್ಯ, ಸಂಜೆ ಅಂಬರೀಷ, ಸುದರ್ಶನ, ಭಾರ್ಗವ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಉಪನ್ಯಾಸಕ ಪ್ರೊ. ಪ್ರವೀಣ ರೈ ಕುರ್ಡುಮೆ, ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ಪಿಲಾತಬೆಟ್ಟು ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷ ಸಂಘಟಕ ದಿವಾಕರ್ ದಾಸ್ ಕಾವಳಕಟ್ಟೆ, ಪುಂಜಾಲಕಟ್ಟೆ ಘಟಕ ಅಧ್ಯಕ್ಷ ಪುರುಷೋತ್ತಮ ಪೂಜಾರಿ,ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಪದಾಽಕಾರಿಗಳಾದ ಪ್ರಭಾಕರ ಪಿ.ಎಂ., ನವೀನ್ ಶೆಟ್ಟಿ , ದಿನಕರ ಶೆಟ್ಟಿ ಅಂಕದಳ, ಹರೀಶ್ಚಂದ್ರ ಶೆಟ್ಟಿಗಾರ್, ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ತುಳಸಿ ಹಾರಬೆ, ಉಮಾ ಡಿ. ಗೌಡ, ಬೇಬಿರೇಖಾ ಶೆಟ್ಟಿ, ಬಬಿತಾ, ರೇಖಾ ಶೆಟ್ಟಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶೋಭಾ ವಿಜಯ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.