ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ, ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು, ಲಯನ್ಸ್ ಕ್ಲಬ್ ಪಂಜ ಸಹಯೋಗದೊಂದಿಗೆ ಬಂಟ್ವಾಳ ಲಯನ್ಸ್ ಸೇವಾ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಹಾಗೂ ಜಿಲ್ಲಾಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು.
ಬಂಟ್ವಾಳ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಎಂ. ಕೃಷ್ಣ ಶ್ಯಾಮ್ ಮಾತನಾಡಿ, ಮಕ್ಕಳಿಗೆ ವಿಷಯ ತಲುಪಲು ಚಿತ್ರಕಲೆ ಒಂದು ಮಾಧ್ಯಮವಾಗಿ ಕೆಲಸ ನಿರ್ವಹಿಸುತ್ತದೆ ಎಂದು ಹೇಳಿದರು. ಸಂಘದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅತಿಥಿಗಳಾಗಿ ಕೊಳ್ನಾಡು – ಸಾಲೆತ್ತೂರು ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ಭಾಗವಹಿಸಿ ಶುಭಕೋರಿದರು. ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಬಾಲವನದ ವಿಶೇಷ ಅಧಿಕಾರಿ ಸುಂದರ ಕೇನಾಜೆ ಭಾಗವಹಿಸಿದ್ದರು. ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ ಗೌಡ ಎಣ್ಮೂರು ಪ್ರಾಸ್ತಾವಿಕವಾಗಿ ಮಾತನಾಡಿ ಇತ್ತೀಚೆಗೆ ಅಗಲಿದ ಪಂಜ ಶಾಲೆಯ ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ಅವರಿಗೆ ನುಡಿನಮನ ಸಲ್ಲಿಸಿದರು. ಕಾರ್ಯದರ್ಶಿ ಅಂಬಿಕಾ , ರಾಜ್ಯ ಸಂಘಟನಾ ಕಾರ್ಯದರ್ಶಿ ಸದಾನಂದ ಬಿರಾದಾರ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಸ್ವಾಗತಿಸಿದರು. ಮುರಳಿಕೃಷ್ಣರಾವ್ ವಂದಿಸಿದರು. ಮುರಳೀಧರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.