ಬಂಟ್ವಾಳ

ಗ್ರಾಮಮಟ್ಟದಲ್ಲಿ ಶಕ್ತಿ, ಬಿಜೆಪಿ ಗ್ರಾಮಸ್ವರಾಜ್ಯ ಕಾರ್ಯಕ್ರಮದಲ್ಲಿ ನಾಯಕರ ಕರೆ

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಬಂಟ್ವಾಳ, ಮೂಡುಬಿದಿರೆ, ಮಂಗಳೂರು, ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಶನಿವಾರ  ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು.

 ಬಿಜೆಪಿ ಪ್ರಜಾಪ್ರಭುತ್ವವಾದಿ ಪಕ್ಷ ವಾಗಿದ್ದು, ಕಾರ್ಯಕರ್ತರ ಅಭಿಪ್ರಾಯಗಳಿಗೂ ನಮ್ಮಲ್ಲಿ ಮನ್ನಣೆ ಇದೆ. ಮುಂದಿನ ದಿನಗಳಲ್ಲಿ  ಗ್ರಾಮಪಂಚಾಯತ್ ಚುನಾವಣೆಯಲ್ಲಿ ಮೈಮರೆಯದೆ ಪಕ್ಷದ ಹಿತಕ್ಕಾಗಿ ದುಡಿಯುವಂತೆ  ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ರೈತರ ಸಂರಕ್ಷಣೆಗೆ ಪಕ್ಷ ಕಟಿಬದ್ಧವಾಗಿದೆ. ಕುಮ್ಕಿಯ ಹಕ್ಕು ರೈತನಿಗೆ ದೊರಕಿಸುವ ಕಾರ್ಯ ನಡೆಸಲಾಗುತ್ತದೆ. ಬಿಜೆಪಿ ಹಿರಿಯ ದಿ.ಡಾ. ವಿ.ಎಸ್.ಆಚಾರ್ಯ ಅವರ ಕನಸಿನಂತೆ ಕರಾವಳಿಗೆ ಸ್ಪಷ್ಟ ಮರಳು ನೀತಿ ಜಾರಿಗೆ ತರಲಾಗುತ್ತದೆ. ಪಂಚಾಯಿತಿ ಬಲವರ್ಧನೆಗೆ ಪ್ರಧಾನಿ ಸಂಕಲ್ಪಿಸಿದ್ದು, ಪ್ರತಿಯೊಂದು ಪಂಚಾಯಿತಿಗೆ ಒಂದರಿಂದ 2 ಕೋಟಿ ರೂಗಳಷ್ಟು ಅನುದಾನ ಬರಲಿದೆ. ಗೋಹತ್ಯೆ ನಿಷೇಧ ಕಟ್ಟುನಿಟ್ಟು ಜಾರಿ, ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ತಡೆ ಕಾನೂನು ಜಾರಿ, ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ಮೂಲಕ ಯುವಜನರ ರಕ್ಷಣೆಯ ಕೆಲಸ ಮಾಡಲಾಗುತ್ತದೆ ಎಂದರು. ಕೇಂದ್ರ ಹಾಗೂ ರಾಜ್ಯ  ಸರ್ಕಾರದ ಅನುದಾನ ಹಾಗೂ ನೈತಿಕ ಬೆಂಬಲದಿಂದ ಗ್ರಾಮಪಂಚಾಯತ್ ಅಧ್ಯಕ್ಷರು ಪ್ರಧಾನಿಯಷ್ಟೇ  ಪವರ್ ಫುಲ್ ಆಗಲಿದ್ದಾರೆ ಎಂದರು.

1 / 8

ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಒಂದು ಕಾಲದಲ್ಲಿ ಪಕ್ಷದ ಸಂಘಟನೆಯನ್ನು ಮಾಡಿರುವ ಹಿರಿಯರ ಶ್ರಮವನ್ನೂ ನೆನಪಿಸಬೇಕು ಎಂದ ಅವರು,ಪಕ್ಷ ಗಟ್ಟಿಯಾಗಬೇಕಾದರೆ ಹೊಸಬರು ಬರಬೇಕು, ನಮ್ಮ ವಿಚಾರ ಧಾರೆ ಯನ್ನು  ಒಪ್ಪಿ ಹೊಸ ನೀರು ಬಂದ ಕಾರಣದಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ  ಬಂದಿದೆ, ಕೇಂದ್ರದಲ್ಲೂ ಶಕ್ತಿಯುತವಾಗಿದೆ. ಗ್ರಾಮಮಟ್ಟದಲ್ಲೂ ಇಂತಹಾ ಕ್ರಾಂತಿಯಾಗಬೇಕಿದೆ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಕೋಲಾರ ಸಂಸದ ಮುನಿಸ್ವಾಮಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ,  ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ  ಕ್ಷೇತ್ರವ್ಯಾಪ್ತಿಯ 39 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ನಡೆಸಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ 400 ಸ್ಥಾನ ಗಳನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮುಲ್ಕಿ ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.  ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಂತೆಯೇ ಗ್ರಾಮಪಂಚಾಯತ್ ಮಟ್ಟದಲ್ಲಿಯೂ ಬಿಜೆಪಿ ಗೆಲ್ಲುವ ನಿರೀಕ್ಷೆ ಜನತೆಯಲ್ಲಿದ್ದು, ಇದು ಶೀಘ್ರ ಸಾಕಾರಗೊಳ್ಳಲಿದೆ ಎಂದರು.  ಮಂಗಳೂರು ನಗರ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪ್ರಧಾನಮಂತ್ರಿ ಗಳ ಗ್ರಾಮ ಸ್ವಾರಜ್ಯದ ಪರಿಕಲ್ಪನೆಯ ಯೋಜನೆಗಳ ಬಗ್ಗೆ ಗ್ರಾಮಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸುವಂತೆ ಅವರು ಮನವಿ ಮಾಡಿದರು.

ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್,  ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ,  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪಕ್ಷ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಉದಯ ಕುಮಾರ್, ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ಬೋಳಿಯಾರು, ಭರತೇಶ್, ರಾಜೇಶ್ ಕಾವೇರಿ, ಸುನಿಲ್ ಆಳ್ವಾ, ತಿಲಕ್ ರಾಜ್, ಚಂದ್ರ ಹಾಸ್ ಪಂಡಿತ್ ಹೌಸ್, ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ವಂದೇ ಮಾತರಂ ಹಾಡಿದರು. ಬಂಟ್ವಾಳ ಕ್ಷೇತ್ರಾಧ್ಯಕ್ಷ  ದೇವಪ್ಪ ಪೂಜಾರಿ ಸ್ವಾಗತಿಸಿದರು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್  ಎಂ. ಪ್ರಸ್ತಾವನೆಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಮೂಡುಬಿದಿರೆ ಕ್ಷೇತ್ರಾಧ್ಯಕ್ಷ  ಸುನಿಲ್ ಆಳ್ವಾ ವಂದಿಸಿದರು. ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ್ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ